ಬೆಂಗಳೂರು, ಜೂ.19- ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಇದುವರೆಗೂ ಉತ್ತಮ ರ್ಯಾಂಕ್ ಪಡೆಯಲು ಸಾಧ್ಯವಾಗದ ಬಿಬಿಎಂಪಿ 2020ರಲ್ಲಿ ಉತ್ತಮ ಸ್ಥಾನ ಪಡೆದುಕೊಳ್ಳುವ ಉದ್ದೇಶದಿಂದ ಚಿತ್ರರಂಗದ ಮೊರೆ ಹೋಗಿವೆ.
ನಗರದ ಬಗ್ಗೆ ಸಾರ್ವಜನಿಕರಿಂದ ಪಾಸಿಟಿವ್ ರೆಸ್ಪಾನ್ಸ್ ಗಳಿಸಬೇಕಾದ ಹಿನ್ನೆಲೆಯಲ್ಲಿ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರಿಂದ ಹಾಡೊಂದು ಬರೆಸಲು ಮೇಯರ್ ಗಂಗಾಂಬಿಕೆ ಮುಂದಾಗಿದ್ದಾರೆ.
ಬಿಬಿಎಂಪಿ ಸದಸ್ಯ ಶಿವರಾಜ್ ಮತ್ತಿತರರೊಂದಿಗೆ ಬಿಬಿಎಂಪಿ ಕಚೇರಿಗೆ ಆಗಮಿಸಿದ ಯೋಗರಾಜ್ ಭಟ್ ಅವರು ಹಾಡು ರಚಿಸುವ ಕುರಿತಂತೆ ಮೇಯರ್ ಅವರೊಂದಿಗೆ ಮಾತುಕತೆ ನಡೆಸಿದರು.
ಮಾತುಕತೆ ಸಂದರ್ಭದಲ್ಲಿ ಸ್ವಚ್ಛ ಬೆಂಗಳೂರು ಕುರಿತಂತೆ ಯೋಗರಾಜ್ ಭಟ್ ಅವರು ಬರೆಯುವ ಹಾಡನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟು ಜನ ಮಾನಸ ತಲುಪುವುದು ಬಿಬಿಎಂಪಿಯ ಉದ್ದೇಶವಾಗಿದೆ.
ಇದುವರೆಗೂ ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣಾದಲ್ಲಿ ಉತ್ತಮ ರ್ಯಾಂಕ್ ಗಳಿಸಲು ಬಿಬಿಎಂಪಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ 2020ರ ಅವಧಿಯಲ್ಲಿ ಉತ್ತಮ ರ್ಯಾಂಕ್ ಗಳಿಸಲೇಬೇಕು ಎಂದು ಹಠಕ್ಕೆ ಬಿದ್ದಿರುವ ಬಿಬಿಎಂಪಿ ಅಧಿಕಾರಿಗಳು ಇತ್ತೀಚೆಗೆ ಎನ್ಜಿಒಗಳ ಸಹಕಾರ ಬೇಡಿದ್ದರು.
ನಗರದಲ್ಲಿ ಟಾಯ್ಲೆಟ್ ನಿರ್ಮಾಣ, ಕಸದ ಸಮಸ್ಯೆ ನಿವಾರಣೆ ಹಾಗೂ ಉತ್ತಮ ರಸ್ತೆಗೆ ಒತ್ತು ನೀಡಿ ಸ್ವಚ್ಛ ಸರ್ವೇಕ್ಷಣದಲ್ಲಿ ರ್ಯಾಂಕ್ ಗಳಿಸಲು ತೀರ್ಮಾನಿಸಿರುವ ಬಿಬಿಎಂಪಿ ಈಗ ಯೋಗರಾಜ್ ಭಟ್ ಅವರ ಸಹಾಯಕ್ಕೆ ಮೊರೆ ಹೋಗಿದೆ.