ಮೈತ್ರಿ ಸರ್ಕಾರ ಮುಂದುವರೆದರೆ ಕಾಂಗ್ರೇಸ್‍ಗೆ ನಷ್ಟ-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜೂ.19-ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಮುಂದುವರೆದರೆ ಕಾಂಗ್ರೆಸ್‍ಗೆ ಲಾಭಕ್ಕಿಂತಲೂ ನಷ್ಟವೇ ಹೆಚ್ಚಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್‍ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಸಮ್ಮಿಶ್ರ ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಏಕಾಏಕಿ ಸಾಲ ಮನ್ನಾ ಯೋಜನೆ ಪ್ರಕಟಿಸಿದ್ದರಿಂದ ಆರ್ಥಿಕ ಹೊರೆ ಹೆಚ್ಚಾಗಿ ಉಳಿದ ಎಲ್ಲಾ ಯೋಜನೆಗಳಿಗೂ ಹಣಕಾಸಿನ ಕೊರತೆ ಎದುರಾಗಿದೆ.

ಈ ಹಿಂದೆ ತಮ್ಮ ನೇತೃತ್ವದ ಸರ್ಕಾರ ಜಾರಿಗೊಳಿಸಿದ ಅನ್ನಭಾಗ್ಯ, ಕೃಷಿಭಾಗ್ಯ, ಶಾದಿಭಾಗ್ಯದಂತಹ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲವಿಲ್ಲದೆ ಸಮಸ್ಯೆ ಎದುರಾಗಿದೆ.

ಸಮ್ಮಿಶ್ರ ಸರ್ಕಾರ ಹೊಸದಾಗಿ ಯಾವ ಯೋಜನೆಗಳನ್ನೂ ಪ್ರಕಟಿಸಿಲ್ಲ, ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿಲ್ಲ, ಬರ ನಿರ್ವಹಣೆ ಸಮರ್ಪಕವಾಗಿಲ್ಲ, ಕೆಳಹಂತದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಇದರಿಂದಾಗಿ ಜನಸಾಮಾನ್ಯರಿಗೆ ಮೈತ್ರಿ ಸರ್ಕಾರದ ಬಗ್ಗೆ ವಿಶ್ವಾಸ ಕಡಿಮೆಯಾಗುತ್ತಿದೆ. ಸರ್ಕಾರದಲ್ಲಿ ಕಾಂಗ್ರೆಸ್ ಪಾಲುದಾರ ಪಕ್ಷವಾಗಿರುವುದರಿಂದ ಎಲ್ಲಾ ತಪ್ಪುಗಳಿಗೂ ಸಹಜವಾಗಿ ಹೊಣೆಯಾಗಬೇಕಾಗುತ್ತದೆ.

ಜೆಡಿಎಸ್‍ಗೆ ಹಳೇ ಮೈಸೂರು ಭಾಗದಲ್ಲಿ ಮಾತ್ರ ನೆಲೆ ಇದೆ. ಸರ್ಕಾರ ಚೆನ್ನಾಗಿ ನಡೆಯಲಿ, ನಡೆಯದೆ ಇರಲಿ ಹಳೇ ಮೈಸೂರು ಭಾಗದಲ್ಲಿ ಅವರ ಬಲಾಬಲ ಕುಸಿಯುವುದಿಲ್ಲ. ಆದರೆ ಕಾಂಗ್ರೆಸ್ ಇಡೀ ರಾಜ್ಯಾದ್ಯಂತ ಸಂಘಟನೆ ಹೊಂದಿದೆ. ಸಮ್ಮಿಶ್ರ ಸರ್ಕಾರದ ಎಲ್ಲಾ ತಪ್ಪುಗಳಿಗೂ ಪಕ್ಷ ಹೊಣೆಯಾಗುವ ಪರಿಸ್ಥಿತಿ ಬಂದರೆ ಮುಂದಿನ ಚುನಾವಣೆಯಲ್ಲಿ ನಾವು 40 ಸ್ಥಾನಗಳನ್ನೂ ಗೆಲ್ಲಲೂ ಸಾಧ್ಯವಾಗುವುದಿಲ್ಲ. ನಿರಾಯಾಸವಾಗಿ ಬಿಜೆಪಿಗೆ ಅಧಿಕಾರ ಬಿಟ್ಟುಕೊಟ್ಟಂತಾಗುತ್ತದೆ.

ಲೋಕಸಭೆ ಚುನಾವಣೆಯಲ್ಲಿ ಜಾತ್ಯತೀತ ಶಕ್ತಿಗಳ ಕ್ರೋಢೀಕರಣವಾಗಬೇಕು ಎಂಬ ಕಾರಣಕ್ಕಾಗಿ ಮೈತ್ರಿ ಸರ್ಕಾರ ರಚಿಸಲಾಯಿತು. ಚುನಾವಣೆಯಲ್ಲೂ ಮೈತ್ರಿ ಮಾಡಿಕೊಳ್ಳಲಾಯಿತು. ಆದರೆ ಇದು ಯಶಸ್ವಿಯಾಗಿಲ್ಲ. ಮೈತ್ರಿಯಿಂದ ಕಾಂಗ್ರೆಸ್‍ಗೆ ಇನ್ನಷ್ಟು ನಷ್ಟ ಉಂಟಾಗಿದೆ. ಇನ್ನೂ ಮೈತ್ರಿ ಸರ್ಕಾರವನ್ನು ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಕರ್ನಾಟಕದ ಕಾಂಗ್ರೆಸ್‍ಗೂ ತಮಿಳುನಾಡು, ಆಂಧ್ರಪ್ರದೇಶದ ಸ್ಥಿತಿಯೇ ಬರಬಹುದು ಎಂಬ ಆತಂಕವನ್ನು ಸಿದ್ದು ವಿವರಿಸಿದ್ದಾರೆ.

ಹಾಗಾಗಿ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ರಕ್ಷಣೆ ಮಾಡುವ ಪ್ರಯತ್ನ ನಡೆಸುವುದು ಬೇಡ. ರಾಜಕೀಯ ಏರಿಳಿತಗಳಲ್ಲಿ ಮೈತ್ರಿ ಮುರಿದು ಹೋದರೂ ಅದಕ್ಕೆ ಚಿಂತಿಸುವ ಅಗತ್ಯವಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸರ್ಕಾರ ಉಳಿಸಿಕೊಳ್ಳುವ ಸಂಪೂರ್ಣ ಹೊಣೆಗಾರಿಕೆ ನೀಡಿ. ಕಾಂಗ್ರೆಸ್ ಶಾಸಕರ ಜೊತೆ ಉತ್ತಮ ಬಾಂಧವ್ಯ ರೂಢಿಸಿಕೊಳ್ಳಲು ಸಲಹೆ ಮಾಡಿ. ಕಾಂಗ್ರೆಸ್ ಸಚಿವರ ಖಾತೆಗಳಲ್ಲಿ ಜೆಡಿಎಸ್ ನಾಯಕರು ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಲು ತಾಕೀತು ಮಾಡಬೇಕಿದೆ. ಮೈತ್ರಿಗೆ ರಾಷ್ಟ್ರಮಟ್ಟದಲ್ಲಿ ಮಾತುಕತೆ ನಡೆದಿರುವುದರಿಂದ ಹೈಕಮಾಂಡ್ ನಾಯಕರೇ ಮಧ್ಯಪ್ರವೇಶಿಸಿ ಈ ಬಗ್ಗೆ ಸೂಚನೆಗಳನ್ನು ನೀಡಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಸುಮಾರು 45 ನಿಮಿಷಗಳ ಮಾತುಕತೆಯಲ್ಲಿ ಜಿಂದಾಲ್ ಭೂಮಿ ಹಂಚಿಕೆ ಪ್ರಕರಣ, ಲೋಕಸಭೆ ಚುನಾವಣೆಯ ಸೋಲಿನ ಕಾರಣಗಳು, ಪಕ್ಷ ಸಂಘಟನೆ, ರಾಜ್ಯ ರಾಜಕಾರಣದಲ್ಲಿ ಶಾಸಕರ ಪಕ್ಷಾಂತರ ಪ್ರಯತ್ನ ಸೇರಿದಂತೆ ಹಲವಾರು ವಿಷಯಗಳ ಕುರಿತು ಸಿದ್ದರಾಮಯ್ಯ ಸುದೀರ್ಘ ವಿವರಣೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ರಾಹುಲ್‍ಗಾಂಧಿಯವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಸಿದ್ದರಾಮಯ್ಯ ಅವರು, ಎಐಸಿಸಿ ಅಧ್ಯಕ್ಷರಾಗಿ ಮುಂದುವರೆಯುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ