ಕಾಂಗ್ರೇಸ್‍ನಲ್ಲಿ ಶಿಸ್ತು ಕೆಲವರಿಗಷ್ಟೇ ಅನ್ವಯ

ಬೆಂಗಳೂರು, ಜೂ.19-ಕಾಂಗ್ರೆಸ್‍ನಲ್ಲಿ ಶಿಸ್ತು ಎಂಬುದು ಕೆಲವರಿಗಷ್ಟೇ ಅನ್ವಯಿಸುತ್ತದೆಯೇ?ಸಿದ್ದರಾಮಯ್ಯ ಬೆಂಬಲಿಗರಿಗೆ ಶಿಸ್ತಿನ ಕಟ್ಟುಪಾಡುಗಳಿಲ್ಲವೇ ಎಂಬ ಪ್ರಶ್ನೆಗಳು ಕಾಂಗ್ರೆಸ್‍ನಲ್ಲಿ ಚರ್ಚೆಯಾಗಲಾರಂಭಿಸಿವೆ.

ಕಳೆದ ಒಂದು ತಿಂಗಳ ಹಿಂದೆ ಶಾಸಕ ರೋಷನ್‍ಬೇಗ್ ರಾಜ್ಯ ನಾಯಕರಾದ ದಿನೇಶ್‍ಗುಂಡೂರಾವ್ ಮತ್ತು ಸಿದ್ದರಾಮಯ್ಯ ಹಾಗೂ ಕೇಂದ್ರದ ನಾಯಕರಾದ ಕೆ.ಸಿ.ವೇಣುಗೋಪಾಲ್ ವಿರುದ್ಧ ಬಹಿರಂಗ ಟೀಕೆ ಮಾಡಿದ್ದರು. ಹೀಗಾಗಿ ರೋಷನ್‍ಬೇಗ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂಬ ಒತ್ತಡಗಳು ಹೆಚ್ಚಾಗಿದ್ದವು.

ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರು ಮೂರು ಬಾರಿ ನೋಟೀಸ್ ಕೂಡ ನೀಡಿದ್ದರು. ಅದಕ್ಕೆ ರೋಷನ್‍ಬೇಗ್ ಉತ್ತರ ಕೊಟ್ಟಿರಲಿಲ್ಲ. ಕೆಪಿಸಿಸಿ ಕಳುಹಿಸಿದ್ದ ವರದಿ ಹೈಕಮಾಂಡ್‍ನಲ್ಲಿ ನೆನೆಗುದಿಗೆ ಬಿದ್ದಿತ್ತು. ನಿನ್ನೆ ಕೆಪಿಸಿಸಿಯ ಕೆಲವು ಪದಾಧಿಕಾರಿಗಳು ಪತ್ರ ಬರೆದು ರೋಷನ್‍ಬೇಗ್ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಸಿದ್ದರಾಮಯ್ಯ ಅವರು ನಿನ್ನೆ ಎಐಸಿಸಿಯ ಶಿಸ್ತು ಪಾಲನಾ ಸಮಿತಿ ಮುಖ್ಯಸ್ಥರಾದ ಎ.ಕೆ.ಆ್ಯಂಟನಿ ಅವರನ್ನು ಭೇಟಿ ಮಾಡಿ ರೋಷನ್‍ಬೇಗ್ ಅವರನ್ನು ಅಮಾನತಿನಲ್ಲಿಡುವಂತೆ ಒತ್ತಾಯಿಸಿದ್ದರು. ಅದರ ಬೆನ್ನಲ್ಲೇ ಹೈಕಮಾಂಡ್ ಕಠಿಣ ನಿರ್ಧಾರ ಕೈಗೊಂಡು ರೋಷನ್‍ಬೇಗ್ ಅವರನ್ನು ಅಮಾನತುಗೊಳಿಸಿದೆ.

ಸಾಮಾನ್ಯವಾಗಿ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರಂತಹ ಚುನಾಯಿತ ಜನಪ್ರತಿನಿಧಿಗಳ ವಿರುದ್ಧ ಎಐಸಿಸಿ ಮಾತ್ರ ಕ್ರಮಕೈಗೊಳ್ಳಬೇಕಿದೆ. ಆದರೆ ನಿನ್ನೆ ಅಮಾನತು ಹೊರಡಿಸಿರುವ ಆದೇಶದಲ್ಲಿ ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿ ವಿ.ವೈ.ಗೋರ್ಪಡೆ ಅವರು ಸಹಿ ಮಾಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‍ನ ಸಹಮತಿಯ ಮೇರೆಗೆ ಆದೇಶ ಹೊರಡಿಸಲಾಗಿದೆ ಎಂದು ಭಾವಿಸಬಹುದಾದರೂ ಇದು ಶಿಷ್ಟಾಚಾರದ ಉಲ್ಲಂಘನೆ ಎಂಬ ಮಾತುಗಳಿವೆ.

ಇದರ ಜೊತೆ ಕಾಂಗ್ರೆಸ್ ನಾಯಕತ್ವದ ವಿರುದ್ಧ ಹೇಳಿಕೆ ನೀಡಿದ ಶಾಸಕರಾದ ರಮೇಶ್‍ಜಾರಕಿ ಹೊಳಿ, ರಾಮಲಿಂಗಾರೆಡ್ಡಿ, ಬಿ.ಸಿ.ಪಾಟೀಲ್, ಕೆ.ಸುಧಾಕರ್, ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ ಮತ್ತಿತರ ವಿರುದ್ಧ ಯಾವುದೇ ಕ್ರಮಕೈಗೊಳ್ಳದೆ ಸಿದ್ದರಾಮಯ್ಯ ವಿರುದ್ಧ ಮಾತನಾಡಿದರು ಎಂಬ ಕಾರಣಕ್ಕಾಗಿ ರೋಷನ್‍ಬೇಗ್ ಅವರನ್ನು ಮಾತ್ರ ಅಮಾನತುಗೊಳಿಸಿದ್ದು ಎಷ್ಟು ಸರಿ ಎಂಬ ಚರ್ಚೆ ಪಕ್ಷದಲ್ಲಿ ನಡೆಯುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ