ಶಾಸಕ ರೋಷನ್‍ಬೇಗ್ ಅಮಾನತು-ಜಾರಿಕೆಯ ಉತ್ತರ ನೀಡಿದ ಕಾಂಗ್ರೇಸ್ ನಾಯಕರು

ಬೆಂಗಳೂರು, ಜೂ.19-ಮಾಜಿ ಸಚಿವ ಹಾಗೂ ಶಾಸಕ ರೋಷನ್‍ಬೇಗ್ ಅವರ ಅಮಾನತು ಪ್ರಕರಣದಲ್ಲಿ ಕಾಂಗ್ರೆಸ್‍ನ ಬಹಳಷ್ಟು ನಾಯಕರು ಜಾರಿಕೆಯ ಉತ್ತರ ನೀಡಿ ವಿವಾದದಿಂದ ದೂರ ಇರುವ ಪ್ರಯತ್ನ ನಡೆಸುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿದ್ದ ರೋಷನ್‍ಬೇಗ್ ಅವರನ್ನು ನಿನ್ನೆ ಕಾಂಗ್ರೆಸ್ ಪಕ್ಷ ಅಮಾನತು ಮಾಡಿದೆ.

ಈ ಬಗ್ಗೆ ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು, ರೋಷನ್‍ಬೇಗ್‍ರ ಅಮಾನತು ಕ್ರಮವನ್ನು ನಾನು ಪತ್ರಿಕೆಗಳಲ್ಲಿ ಓದಿ ತಿಳಿದುಕೊಂಡೆ. ಯಾವ ಕಾರಣಕ್ಕೆ ಅಮಾನತು ಮಾಡಿದ್ದಾರೆ ಎಂದು ಗೊತ್ತಿಲ್ಲ. ಪಕ್ಷದ ನಾಯಕರ ಜೊತೆ ಮತ್ತು ಕೆಪಿಸಿಸಿ ಅಧ್ಯಕ್ಷರ ಜೊತೆ ಮಾತನಾಡಿದ ನಂತರ ಪ್ರತಿಕ್ರಿಯೆ ಕೊಡುತ್ತೇನೆ ಎಂದಿದ್ದಾರೆ.

ರೋಷನ್‍ಬೇಗ್ ಅವರಿಗೆ ಈಗಾಗಲೇ 3ಬಾರಿ ನೋಟಿಸ್ ನೀಡಲಾಗಿತ್ತು. ಅದಕ್ಕೆ ಅವರು ಉತ್ತರ ನೀಡಿರಲಿಲ್ಲ.ಮುಖಂಡರನ್ನು ನಿಂದಿಸಿದ್ದಾರೆ, ಲೋಕಸಭೆ ಚುನಾವಣೆಯಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ ಎಂಬ ಆರೋಪಗಳಿದ್ದು, ದೂರು ಬಾಕಿ ಇತ್ತು.ಆದರೆ ಅಮಾನತು ಕ್ರಮವನ್ನು ಯಾವ ಕಾರಣಕ್ಕಾಗಿ ತೆಗೆದುಕೊಳ್ಳಲಾಗಿದೆ ಎಂಬುದನ್ನು ಕೇಳಿ ತಿಳಿದುಕೊಳ್ಳುತ್ತೇನೆ ಎಂದರು.

ಇನ್ನೊಂದೆಡೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಪಕ್ಷದಲ್ಲಿ ಶಿಸ್ತು ಬಹಳ ಮುಖ್ಯ.ಇಲ್ಲಿ ವ್ಯಕ್ತಿ ಪೂಜೆ ಮಾಡಬಾರದು, ಪಕ್ಷ ಪೂಜೆ ಮಾಡಬೇಕು. ಸಿಎಲ್‍ಪಿ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಸೇರಿದಂತೆ ನಾಯಕರಿಗೆ ಗೌರವ ಕೊಡಬೇಕು ಎಂದು ಹೇಳಿದರು.

ರೋಷನ್‍ಬೇಗ್ ವಿರುದ್ಧ ಮಾತ್ರ ಕ್ರಮಕೈಗೊಳ್ಳಲಾಗಿದೆ. ಇತರರ ವಿರುದ್ಧ ಕ್ರಮ ಜರುಗಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್ ಸದ್ಯಕ್ಕೆ ಏನನ್ನೂ ಮಾತನಾಡಬೇಡಿ ಎಂಬ ಆದೇಶವಿದೆ. ನಾನು ಏನನ್ನೂ ಮಾತನಾಡುವುದಿಲ್ಲ ಎಂದು ಹೇಳಿ ಜಾರಿಕೊಂಡರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ