ಬೆಂಗಳೂರು,ಜೂ.19- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಒಂದು ವರ್ಷದ ಸಾಧನೆಯನ್ನು ಬಿಂಬಿಸುವ ಮೈತ್ರಿ ಪರ್ವ ಎಂಬ ಹೆಸರಿನ ಪುಸ್ತಕ ನಾಳೆ ಬಿಡುಗಡೆಯಾಗಲಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಸರ್ಕಾರದ ಒಂದು ವರ್ಷದ ಸಾಧನೆಯ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದಾಗ ಜಾತ್ಯತೀತ ಶಕ್ತಿಗಳು ಒಗ್ಗೂಡುವ ಉದ್ದೇಶದಿಂದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆ, ಆ ನಂತರ ಒಂದು ವರ್ಷದಲ್ಲಿ ಸರ್ಕಾರ ಅನುಷ್ಠಾನಗೊಳಿಸಿದ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಪುಸ್ತಕ ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರದಲ್ಲೇ ಮೊದಲ ಬಾರಿಗೆ ಕೇವಲ 9 ತಿಂಗಳ ಅವಧಿಯಲ್ಲಿ ರೈತರ ಬೆಳೆ ಸಾಲ ಮನ್ನಾ ಮಾಡಿದ ಕೀರ್ತಿಗೆ ರಾಜ್ಯದ ಮೈತ್ರಿ ಸರ್ಕಾರ ಪಾತ್ರವಾಗಲಿದೆ. ಸಹಕಾರಿ ಬ್ಯಾಂಕ್ಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ರೈತರ ಸಾಲವನ್ನು ಮನ್ನ ಮಾಡಿರುವುದು, ಬೀದಿಬದಿ ವ್ಯಾಪಾರಿಗಳಿಗೆ ಬಡ್ಡಿರಹಿತ ಸಾಲ ನೀಡಿಕೆ, ಮಾಶಾಸನ ಹೆಚ್ಚಳ ಸೇರಿದಂತೆ ಸರ್ಕಾರದ ಸಾಧನೆಯ ಹಲವು ಮಾಹಿತಿಗಳು ಪುಸ್ತಕದಲ್ಲಿರುತ್ತದೆ ಎಂದು ತಿಳಿದುಬಂದಿದೆ.
ಸುಮಾರು 43 ಸಾವಿರ ಕೋಟಿ ರೈತರ ಸಾಲ ಪ್ರಮಾಣ 24 ಸಾವಿರ ಕೋಟಿಗಳಿಗೆ ಇಳಿಕೆಯಾಗಲಿದೆ ಎಂಬ ಲೆಕ್ಕಾಚಾರವಿದೆ. ಅವಧಿ ಮುಗಿದ ಸಹಕಾರಿ ಬ್ಯಾಂಕ್ಗಳ ಸಾಲ ಮನ್ನವಾಗುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ಎರಡು ಬಜೆಟ್ಗಳಲ್ಲಿ 430 ಭರವಸೆಗಳ ಪೈಕಿ 400 ಭರವಸೆಗಳಿಗೆ ಸರ್ಕಾರಿ ಆದೇಶ ಹೊರಡಿಸಿ ಅನುಷ್ಠಾನ ಕೈಗೊಂಡಿರುವುದು, ಮುಖ್ಯಮಂತ್ರಿಗಳ ಜನತಾದರ್ಶನದಲ್ಲಿ ಸ್ವೀಕೃತವಾದ ಅರ್ಜಿಗಳ ವಿಲೇವಾರಿ, ಉದ್ಯೋಗ ನೀಡಿಕೆ, ವೈದ್ಯಕೀಯ ನೆರವು, ರಸ್ತೆ ನಿರ್ಮಾಣ, ಆಂಗ್ಲಮಾಧ್ಯಮ ಶಾಲೆ ಸೇರಿದಂತೆ ಸರ್ಕಾರದ ಸಾಧನೆಯ ವಿವರಗಳನ್ನು ಮೈತ್ರಿ ಪರ್ವ ಎಂಬ ಪುಸ್ತಕ ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ.