ಬೆಂಗಳೂರು, ಜೂ. 18- ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳನ್ನು ಸರ್ಕಾರದೊಂದಿಗೆ ವಿಲೀನಗೊಳಿಸಿ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಣೆ ಮಾಡುವಂತೆ ಒತ್ತಾಯಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರ ಕನ್ನಡ ಕೃಷ್ಟಿ ಪ್ರತಿಷ್ಟಾನದ ವತಿಯಿಂದ ಬೃಹತ್ ಸಹಿ ಸಂಗ್ರಹ ಆಂದೋಲನ ಹಮ್ಮಿಕೊಳ್ಳಲಾಯಿತು.
ನಗರದ ಟೌನಹಾಲ್ ಮುಂಭಾಗ ಹಿರಿಯ ಸಾಹಿತಿ ದಂಪತಿಗಳಾದ ನಾಡೋಜ ಹಂಪನಾ ನಾಗರಾಜಯ್ಯ ಮತ್ತು ನಾಡೋಜ ಕಮಲಾಹಂಪನಾ ಆಂದೋಲನಕ್ಕೆ ಚಾಲನೆ ನೀಡಿದರು.
ಈ ವೇಳೆ ಕಮಲ ಹಂಪನಾ ಮಾತನಾಡಿ, ಸಾರಿಗೆ ನೌಕರರು ಸರ್ಕಾರಿ ನೌಕರರು ಅಲ್ಲ ಎಂಬುದು ನನಗೆ ಅಚ್ಚರಿಯಾಗಿದೆ. ಕೂಡಲೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಣೆ ಮಾಡಿ.ರಾಜ್ಯ ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕೆಂದು ಮನವಿ ಮಾಡಿದರು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರ ಕನ್ನಡ ಕೃಷಿ ಪ್ರತಿಷ್ಠಾನದ ಅಧ್ಯಕ್ಷ ಕೆ.ಎಸ್.ಪ್ರೀತ್‍ಂ ಮಾತನಾಡಿ ಆಂಧ್ರಪ್ರದೇಶದ ಮಾದರಿಯಲ್ಲಿ ನಮ್ಮ ರಾಜ್ಯ ಸರ್ಕಾರವು ಸಾರಿಗೆಯ ನಾಲ್ಕು ನಿಗಮಗಳನ್ನು ಸರ್ಕಾರದೊಂದಿಗೆ ವಿಲೀನಗೊಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯಾದ್ಯಂತ 1,30,000 ನೌಕರರ ಸಹಿ ಸಂಗ್ರಹ ಮಾಡಿ, ಸಾಹಿತಿಗಳೊಂದಿಗೆ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎನ್.ನಾರಾಯಣಗೌಡ ನೇತೃತ್ವದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ಈ ವೇಳೆ 2000ಕ್ಕೂ ಹೆಚ್ಚು ನೌಕರರ ಸಹಿ ಸಂಗ್ರಹ ಮಾಡಲಾಯಿತು.