ರೈಲ್ವೆ ಕೆಳಸೇತುವೆಗಳಲ್ಲಿ ರೈಲು ಸಂಚರಿಸುವಾಗ ಮಲಿನ ನೀರು ಸೋರಿಕೆ-ಸೋರಿಕೆಯನ್ನ ತಡೆಗಟ್ಟಲು ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿದ ಮೇಯರ್

ಬೆಂಗಳೂರು, ಜೂ.18- ನಗರದಲ್ಲಿರುವ ಬಹುತೇಕ ರೈಲ್ವೆ ಕೆಳಸೇತುವೆಗಳಲ್ಲಿ ರೈಲು ಸಂಚಾರದ ಸಂದರ್ಭದಲ್ಲಿ ಮಲಿನ ನೀರು ಸೋರಿಕೆಯಾಗುತ್ತಿರುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಮೇಯರ್ ಗಂಗಾಂಬಿಕೆ ಅವರು ರೈಲ್ವೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ನಗರದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಡಿ.ಜಿ.ಮಲ್ಯ ಅವರನ್ನು ಭೇಟಿ ಮಾಡಿದ ಮೇಯರ್ ಗಂಗಾಂಬಿಕೆ ರೈಲ್ವೆ ಸೇತುವೆಗಳಲ್ಲಿ ರೈಲು ಸಂಚಾರದ ಸಂದರ್ಭದಲ್ಲಿ ಮಲಿನ ನೀರು ಸೋರಿಕೆಯಾಗುತ್ತದೆ. ಇದರಿಂದಾಗಿ ವಾಹನ ಸವಾರರು ಸಂಚರಿಸುವಾಗ ತೊಂದರೆಯಾಗುತ್ತಿದೆ. ರೈಲು ಮುಂದೆ ಸಾಗುವ ತನಕ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ನಂತರ ಹೋಗುತ್ತಾರೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಕೋರಿದರು.

ಮೇಯರ್ ಅವರ ಮನವಿಗೆ ಸ್ಪಂದಿಸಿದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಈಗಾಗಲೇ ಬಯೋ ಟಾಯ್ಲೆಟ್‍ಗಳನ್ನು ರೈಲುಗಳಲ್ಲಿ ಅಳವಡಿಸಲು ಕ್ರಮ ವಹಿಸಲಾಗಿದೆ. ಇದರಿಂದಾಗಿ ಸಾಕಷ್ಟು ಸುಧಾರಣೆಯಾಗಲಿದೆ ಎಂದು ತಿಳಿಸಿದರು.

ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಾವು ಸೂಚಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶನ ನೀಡುವುದಾಗಿಯೂ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಮೇಯರ್ ಅವರಿಗೆ ಭರವಸೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ