ಬೆಂಗಳೂರು, ಜೂ.18-ಕರ್ನಾಟಕದ ಎರಡನೇ ಹಂತದ ನಗರಗಳಲ್ಲಿ ಐಟಿ-ಬಿಟಿ ಉದ್ಯಮವನ್ನು ಬೆಳೆಸುವ ಸಲುವಾಗಿ ಹೊಸ ಮಾಹಿತಿ ತಂತ್ರಜ್ಞಾನ ನೀತಿಯನ್ನು ರೂಪಿಸಲಾಗುತ್ತಿದೆ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ತಿಳಿಸಿದ್ದಾರೆ.
ಅಲಿಕ್ಸಾರ್ ವೆಂಚರ್ಸ್ನ ಚೇರ್ಮನ್ ಕ್ರಿಷ್ಗೋಪಾಲಕೃಷ್ಣನ್ ಅವರೊಂದಿಗೆ 15ನೇ ವಿಷನ್ಗ್ರೂಪ್ ಸದಸ್ಯರ ಸಭೆಯಲ್ಲಿ ಮಾತನಾಡಿದ ಗೌರವ್ ಗುಪ್ತಾ ಅವರು,ಕರ್ನಾಟಕವನ್ನು ಹೊಸ ಸವಾಲುಗಳಿಗೆ ಸಿದ್ಧಗೊಳಿಸಲು ಎರಡನೇ ನಗರಗಳಲ್ಲಿ ಬಂಡವಾಳ ಹೂಡಿಕೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಮನಹರಿಸಿದ್ದು, ಹೊಸ ನೀತಿಯನ್ನು ರೂಪಿಸಲಾಗುತ್ತಿದೆ.
ಕೃತಕ ಬುದ್ಧಿವಂತಿಕೆ, ಮೆಷಿನ್ ಲರ್ನಿಂಗ್ ಮತ್ತು ವರ್ಚುವಲ್ ರಿಯಾಲಿಟಿ ಇತ್ಯಾದಿ ತಂತ್ರಜ್ಞಾನಗಳು ಪ್ರವರ್ಧಮಾನಕ್ಕೆ ಬರುತ್ತಿರುವ ಈ ಸಂದರ್ಭದಲ್ಲಿ ಎಲ್ಲವನ್ನೂ ಒಳಗೊಂಡಂತಹ ಡಿಜಿಟಲ್ ಉದ್ಯಮದ ಬೆಳವಣಿಗೆಗೆ ನೂತನ ನೀತಿ ಸಹಕಾರಿಯಾಗಲಿದೆ ಮತ್ತು ಉದ್ಯೋಗಾವಕಾಶಗಳು ಹೆಚ್ಚಾಗಲಿವೆ ಎಂದರು.
ಐಟಿ-ಬಿಟಿ ಮತ್ತು ಡಿಜಿಟಲ್ ಉದ್ಯಮದಲ್ಲಿ ಸದೃಢ ನಾಯಕತ್ವ ಹೊಂದಿರುವ ಕರ್ನಾಟಕ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ.
ಮುಂದಿನ ನವೆಂಬರ್ 18 ಮತ್ತು 19ರಂದು ನಡೆಯಲಿರುವ ಬಿಟಿಎಸ್ 2019 ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ಕರ್ನಾಟಕ ತನ್ನ ತಂತ್ರಜ್ಞಾನ ಶಕ್ತಿಯನ್ನು ಅನಾವರಣಗೊಳಿಸಲಿದೆ ಎಂದು ತಿಳಿಸಿದರು.
ಆಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಸಹಭಾಗಿತ್ವ ಹೊಂದಲು ಎಸ್ಟೋನಿಯಾ, ಕೆನಡಾ ಮತ್ತು ಸ್ವಿಡ್ಜರ್ಲೆಂಡ್ಗಳಂತಹ ದೇಶಗಳೊಂದಿಗೆ ನಾವು ಮಾತುಕತೆ ನಡೆಸಿದ್ದೇವೆ. ಜರ್ಮನಿ ಮತ್ತು ಲೆದರ್ಲೆಂಡ್ ದೇಶಗಳೊಂದಿಗೆ ಸ್ಟಾರ್ಟ್ಅಪ್ಗಳ ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ಸಿದ್ಧರಿದ್ದೇವೆ ಎಂದು ಹೇಳಿದರು.
ವಿಷನ್ಗ್ರೂಪ್ನ ನೇತೃತ್ವವನ್ನು ಕ್ರಿಷ್ಗೋಪಾಲಕೃಷ್ಣನ್ ವಹಿಸಿದ್ದರು.