ಇದೇ 21ರಿಂದ 24 ರವರೆಗೆ 8ನೇ ಎಲೇಸಿಯಾ-2019 ಪ್ರದರ್ಶನ

Varta Mitra News

ಬೆಂಗಳೂರು, ಜೂ.18-ಇಂಧನ, ವಿದ್ಯುತ್, ನಿಯಂತ್ರಕಗಳು ಮತ್ತು ವಿದ್ಯುದ್ದೀಪಗಳ ವಿಶ್ವದ ಅತ್ಯುತ್ತಮವಾದ ಪ್ರದರ್ಶನ 8 ನೇ ಎಲೇಸಿಯಾ-2019 ಗೆ ಬೆಂಗಳೂರಿನ ಬಿಐಇಸಿಯಲ್ಲಿ ಅದ್ಧೂರಿ ಚಾಲನೆ ದೊರೆಯಲಿದೆ.

10 ನೇ ಸರಣಿಯ ಎಲೇಸಿಯಾ ಇದಾಗಿದ್ದು, ಇದೇ 21 ರಿಂದ 24 ರವರೆಗೆ ನಗರದ ಇಂಟರ್‍ನ್ಯಾಷನಲ್ ಎಕ್ಸಿಬಿಷನ್ ಸೆಂಟರ್‍ನಲ್ಲಿ ನಡೆಯಲಿರುವ ಈ ಪ್ರದರ್ಶನದಲ್ಲಿ ಎಲೆಕ್ಟ್ರಿಕಲ್, ಲೈಟಿಂಗ್ ಪವರ್ ಸಮುದಾಯ ಅಂದರೆ ಉದ್ಯಮದ ಪ್ರತಿನಿಧಿಗಳು ಒಂದೆಡೆ ಸೇರಲಿದ್ದಾರೆ.

ಜಗತ್ತಿನ 5 ವಿವಿಧ ದೇಶಗಳ 400 ಕ್ಕೂ ಅಧಿಕ ಪ್ರದರ್ಶಕರು ಈ ಎಲೇಸಿಯಾ 2019 ರಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶನ ಮಾಡಲಿದ್ದು, ಎಲೇಸಿಯಾ ದೇಶದ ಎಲ್ಲಾ ಭಾಗಗಳಿಂದ ಆಗಮಿಸುವ ಪ್ರತಿನಿಧಿಗಳನ್ನು ಆಕರ್ಷಿಸಲಿದೆ. ಈ ಮೂಲಕ ಉದ್ಯಮದ ವ್ಯಾಪ್ತಿಯನ್ನು ಇಲ್ಲಿ ಅನಾವರಣ ಮಾಡಲಿದೆ. ಉತ್ಪಾದಕರು, ಒಇಎಂಗಳು, ಪೂರೈಕೆದಾರರು ವಿತರಕರಿಗೆ, ಏಜೆಂಟರು ಮತ್ತು ತಯಾರಕರಿಗೆ ಉತ್ತಮ ವೇದಿಕೆಯನ್ನು ಒದಗಿಸಲಿದೆ.

ಪ್ರಮುಖವಾಗಿ ವಿದ್ಯುತ್ ಉತ್ಪಾದನೆ, ವಿತರಣೆ ಮತ್ತು ಪ್ರಸರಣ- ವಿದ್ಯುತ್ ಜಾಲದ ಆಧುನೀಕರಣ, ಸೈಬರ್ ಬೆದರಿಕೆಗಳು ಮತ್ತು ಡಿಜಿಟಲ್ ಸಾಮರ್ಥ್ಯಗಳು ಅಥವಾ ಸಂಗ್ರಹ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಕೆ ಮಾಡಿಕೊಳ್ಳುವುದಕ್ಕೆ ಹೂಡಿಕೆ ಹೆಚ್ಚಾಗುವ ಸಾಧ್ಯತೆಗಳಿವೆ.

ಈ ಬಗ್ಗೆ ಟ್ರೂಯಿನ್ ಎಕ್ಸಿಬಿಟರ್ಸ್ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಸಿರಿಲ್ ಪೆರೇರಾ ಮಾತನಾಡಿ, ಪ್ರತಿಯೊಂದು ಸರಣಿಯಲ್ಲೂ ಪ್ರದರ್ಶಕರು ಮತ್ತು ದೇಶಗಳು ಹೆಚ್ಚಾಗುತ್ತಾ ಬರುತ್ತಿವೆ. ಆಧುನಿಕ ಉದ್ಯಮಕ್ಕೆ ಹೊಸ ರೂಪ ನೀಡುತ್ತಿರುವ ಅತ್ಯುತ್ತಮವಾದ ಎಲೆಕ್ಟ್ರಿಕ್ ಟ್ರೆಂಡ್‍ಗಳನ್ನು ಪ್ರದರ್ಶಿಸಲು ಈ ಎಲೇಸಿಯಾ ಒಂದು ಕಾರ್ಯತಂತ್ರದ ವೇದಿಕೆ ಎಂದು ಪರಿಗಣಿಸಲ್ಪಡುತ್ತಿರುವುದು ನಿಜಕ್ಕೂ ಸ್ವಾಗತಾರ್ಹ. ಎಲೇಸಿಯಾದಂತಹ ಕಾರ್ಯಕ್ರಮಗಳಿಂದ ತಂತ್ರಜ್ಞಾನ ಮತ್ತು ವಿಜ್ಞಾನಗಳೆರಡೂ ಪ್ರಸರಣ ಹೊಂದಿ ಭಾರತದ ಉದ್ಯಮವನ್ನು ಇನ್ನೂ ಹೆಚ್ಚು ವಿಸ್ತಾರದಲ್ಲಿ ಬಲವರ್ಧನೆಗೊಳಿಸಲಿವೆ ಎಂದು ಅಭಿಪ್ರಾಯಪಟ್ಟರು.

ಆರ್ಕಿಟೆಕ್ಟ್‍ಗಳು ಒಇಎಂಗಳು, ಆರ್ಕಿಟೆಕ್ಚರಲ್ ಡಿಸೈನ್ ಕನ್ಸಲ್ಟಿಂಗ್ ಸರ್ವೀಸಸ್, ಬಿಲ್ಡರ್ಸ್ ಅಸೋಸಿಯೇಷನ್ಸ್, ಮ್ಯಾನೇಜಿಂಗ್ ಡೈರೆಕ್ಟರ್ಸ್, ಸಿಇಒಗಳು, ಡಿಸೈನ್ ಕನ್ಸಲ್ಟೆಂಟ್ಸ್ ಇಂಜಿನಿಯರ್ಸ್, ಡೀಲರ್ಸ್, ಡಿಸ್ಟ್ರಿಬ್ಯೂಟರ್ಸ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮುಖ್ಯಸ್ಥರು, ನಿರ್ವಹಣೆ ಕಾರ್ಯಾಚರಣೆಯ ಮುಖ್ಯಸ್ಥರು ಸೇರಿದಂತೆ ಇನ್ನೂ ಹಲವಾರು ವಿಭಾಗದ ಪ್ರತಿನಿಧಿಗಳು ಈ ಪ್ರದರ್ಶನಕ್ಕೆ ಆಗಮಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ