ಬೆಂಗಳೂರು,ಜೂ.18- ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಐಎಂಎ ಮುಖ್ಯಸ್ಥ ಮೊಹಮ್ಮದ್ ಮನ್ಸೂರ್ ಖಾನ್ ದುಬೈನಲ್ಲಿದ್ದಾನೆ ಎಂದು ತಿಳಿದುಬಂದಿದೆ.
ಆತನನ್ನು ಅಲ್ಲಿಂದ ಬೆಂಗಳೂರು ನಗರಕ್ಕೆ ಕರೆತರಲು ಎಸ್ಐಟಿ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ನಡೆಸುತ್ತಿದೆ.
ಮನ್ಸೂರ್ ಖಾನ್ ದುಬೈಗೆ ತೆರಳಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ವಿಮಾನ ನಿಲ್ದಾಣದಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಯನ್ನು ಎಸ್ಐಟಿ ಪರಿಶೀಲನೆ ನಡೆಸಿದೆ.
ಒಟ್ಟಾರೆ ಮನ್ಸೂರ್ ದುಬೈಗೆ ತೆರಳಿದ್ದಾರೆಂಬ ಶಂಕೆ ಹಿನ್ನೆಲೆಯಲ್ಲಿ ಆತನನ್ನು ಕರೆತರಲು ಬೇಕಾದ ಅಗತ್ಯ ಎಲ್ಲಾ ದಾಖಲೆಗಳನ್ನು ಎಸ್ಐಟಿ ಸಂಗ್ರಹಿಸುತ್ತಿದ್ದು, ಈಗಾಗಲೇ ಮಹತ್ವದ ವಿವರಗಳನ್ನು ಕಲೆ ಹಾಕಿದೆ.
ಈ ನಡುವೆ ಮನ್ಸೂರ್ ಖಾನ್ ಅವರ ಸಂಬಂಧಿಕರ ಮನೆಗಳ ಮೇಲೆ ಎಸ್ಐಟಿ ದಾಳಿ ಮಾಡಿ ಹಲವು ಮಹತ್ವದ ದಾಖಲೆ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದೆ.
ದಾಳಿ ವೇಳೆ ತನಿಖೆಗೆ ಅಗತ್ಯವಿರುವ ದಾಖಲೆಗಳು ಸಹ ಲಭ್ಯವಾಗಿದೆ. ಈಗಾಗಲೆ ಎಸ್ಐಟಿ ಏಳು ಮಂದಿ ಐಎಂಎ ನಿರ್ದೇಶಕರಿಂದ ಹಲವು ಮಹತ್ವದ ಮಾಹಿತಿಗಳನ್ನು ಪಡೆದುಕೊಂಡಿದೆ.
ಐಎಂಎ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿರುವವರು ಇಂದೂ ಸಹ ದೂರು ನೀಡುತ್ತಿದ್ದು, ದೂರದಾರರ ಸಂಖ್ಯೆ 42 ಸಾವಿರಕ್ಕೆ ಏರುವ ಸಾಧ್ಯತೆ ಇದೆ.