ಬೆಂಗಳೂರು,ಜೂ.17-ನಿರ್ಮಾಣ ಹಂತದ ಟ್ಯಾಂಕ್ಗೆ ಅಳವಡಿಸಿದ್ದ ಸೆಂಟ್ರಿಂಗ್ ಕುಸಿದು ಮೂವರು ಕಾರ್ಮಿಕರು ಮೃತಪಟ್ಟು, 17 ಮಂದಿ ಗಾಯಗೊಂಡಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ನಡೆದಿದೆ.
ಮೃತಪಟ್ಟವರ ಪೈಕಿ ಕೃಷ್ಣ ಎಂಬುವರ ಗುರುತು ಪತ್ತೆಹಚ್ಚಲಾಗಿದ್ದು, ಇನ್ನಿಬ್ಬರ ಹೆಸರು ಸದ್ಯಕ್ಕೆ ತಿಳಿದುಬಂದಿಲ್ಲ.
ಬಿಡಬ್ಲ್ಯುಎಸ್ಎಸ್ಬಿಯಿಂದ ಲುಂಬಿನಿ ಗಾರ್ಡನ್ ಬಳಿಯ ಜೋಗಪ್ಪ ಲೇಔಟ್ನಲ್ಲಿ 110 ಎಂಎಲ್ಡಿ ಸಾಮಥ್ರ್ಯದ ನೀರು ಶುದ್ದೀಕರಣ ಘಟಕದ ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿದ್ದು, ಕೋಲ್ಕತ್ತಾ ಮೂಲದ ಕಾರ್ಮಿಕರು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಸೆಂಟ್ರಿಂಗ್ ವೆಲ್ಡಿಂಗ್ ಕಾಮಗಾರಿ ನಡೆಯುತ್ತಿತ್ತು. ಇಂದು ಬೆಳಗ್ಗೆ 11.30ರ ಸುಮಾರಿನಲ್ಲಿ ಕಾಮಗಾರಿ ವೀಕ್ಷಿಸಲು ಸೆಂಟ್ರಿಂಗ್ ಮೇಲೆ ಕೆಲವರು ಹತ್ತಿದ್ದಾಗ ಕಂಬ ಸಡಿಲಗೊಂಡು ನೋಡನೋಡುತ್ತಿದ್ದಂತೆ ಕುಸಿದ ಪರಿಣಾಮ ಒಳಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಪೈಕಿ ಮೂವರು ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ 17 ಮಂದಿ ಗಾಯಗೊಂಡಿದ್ದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಸುದ್ದಿ ತಿಳಿದ ಅಮೃತಹಳ್ಳಿ ಠಾಣೆ ಪೊಲೀಸರು ಮತ್ತು ಆರು ಅಗ್ನಿಶಾಮಕ ವಾಹನಗಳೊಂದಿಗೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರ್ಮಿಕರ ರಕ್ಷಣೆ ಕಾರ್ಯದಲ್ಲಿ ತೊಡಗಿದ್ದರು. ಅವಶೇಷಗಳಡಿ ಇನ್ನು ಹಲವು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಘಟನಾ ಸ್ಥಳಕ್ಕೆ ಬಿಡಬ್ಲ್ಯು ಎಸ್ಎಸ್ಬಿ ಪ್ರಧಾನ ಅಭಿಯಂತರ ಕೆಂಪರಾಮಯ್ಯ, ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.