ಜಿಂದಾಲ್‍ಗೆ ಭೂಮಿ ಮಾರಾಟ-ಸರ್ಕಾರ ನಿರ್ಣಯವನ್ನು ಬದಲಾಯಿಸಬಾರದು-ಎಫ್‍ಕೆಸಿಸಿಐ

ಬೆಂಗಳೂರು, ಜೂ.17-ಬಳ್ಳಾರಿ ಜಿಲ್ಲೆಯಲ್ಲಿ 3600 ಎಕರೆ ಭೂಮಿಯನ್ನು ಜಿಂದಾಲ್ ಸಂಸ್ಥೆಗೆ ಮಾರಾಟ ಮಾಡುವ ನಿರ್ಣಯವನ್ನು ಸರ್ಕಾರ ಬದಲಾವಣೆ ಮಾಡಬಾರದು ಎಂದು ಎಫ್‍ಕೆಸಿಸಿಐ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಎಫ್‍ಕೆಸಿಸಿಐನ ಅಧ್ಯಕ್ಷ ಸುಧಾಕರ್‍ಶೆಟ್ಟಿ ಅವರು, 2005 ಮತ್ತು 2006ರಲ್ಲಿ ಎರಡು ಹಂತದಲ್ಲಿ ಒಟ್ಟು 3600 ಎಕರೆ ಭೂಮಿಯನ್ನು ಜಿಂದಾಲ್‍ಗೆ ನೀಡಿದೆ. ಹತ್ತು ವರ್ಷಗಳ ಅವಧಿ ಪೂರ್ಣಗೊಂಡಿರುವುದರಿಂದ ಭೂಮಿಯನ್ನು ಖರೀದಿ ಕರಾರು ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ. ಆದರೆ ರಾಜಕೀಯ ಕಾರಣಕ್ಕಾಗಿ ವಿರೋಧಗಳು ವ್ಯಕ್ತವಾಗುತ್ತಿದ್ದು, ಸರ್ಕಾರ ಮರುಪರಿಶೀಲನೆಗೆ ಮುಂದಾಗಿದೆ.

ಮುಂದಿನ ವರ್ಷ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಿರುವ ರಾಜ್ಯ ಸರ್ಕಾರ ದೇಶ-ವಿದೇಶಗಳ ಉದ್ಯಮಿಗಳನ್ನು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ಆಹ್ವಾನ ನೀಡುತ್ತಿದೆ. ಬಂಡವಾಳ ಹೂಡಿಕೆ ಮಾಡಲು ಬರುವವರು ಇಲ್ಲಿನ ಉದ್ಯಮಿಗಳಿಗೆ ಸರ್ಕಾರ ಯಾವ ರೀತಿಯ ಸೌಲಭ್ಯ ನೀಡಿದೆ ಎಂಬುದನ್ನೂ ಪರಿಶೀಲನೆ ಮಾಡುತ್ತಾರೆ. ಭೂಮಿಯನ್ನು ಕೊಟ್ಟು ವಾಪಸ್ ತೆಗೆದುಕೊಂಡಿದ್ದೇ ಆದರೆ ಇತರರು ಬಂಡವಾಳ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಾರೆ ಎಂದರು.

ಜಿಂದಾಲ್ ಸಂಸ್ಥೆ 1994 ರಿಂದಲೂ ಕೈಗಾರಿಕೆ ನಡೆಸುತ್ತಿದೆ.25 ಸಾವಿರ ಜನರಿಗೆ ಉದ್ಯೋಗ ನೀಡಿದೆ. ಬೃಹತ್ ಕೈಗಾರಿಕೆಗಳಿಂದ ರಾಜ್ಯ ಸರ್ಕಾರಕ್ಕೆ ಸುಮಾರು 7 ಸಾವಿರ ಕೋಟಿ ತೆರಿಗೆ ಸಂಗ್ರಹವಾಗುತ್ತಿದೆ. ಈಗ ಜಿಂದಾಲ್‍ನಿಂದ ಭೂಮಿ ಹಿಂಪಡೆಯುವ ನಿರ್ಧಾರ ತೆಗೆದುಕೊಂಡರೆ ತಪ್ಪು ಸಂದೇಶ ಹೋಗುತ್ತದೆ.ರಾಜ್ಯಸರ್ಕಾರ ತನ್ನ ನಿರ್ಧಾರ ಬದಲಿಸಬಾರದು ಎಂದು ಒತ್ತಾಯಿಸಿದರು.

ಉಪನಗರಗಳ ನಿರ್ಮಾಣ, ಪೆರಿಫೆರಲ್‍ರಿಂಗ್ ರಸ್ತೆ, ಸಬರ್ಬನ್ ರೈಲು ಯೋಜನೆಗಳನ್ನು ಸರ್ಕಾರ ತುರ್ತಾಗಿ ಕೈಗೆತ್ತಿಕೊಂಡು ಅವುಗಳನ್ನು ಪೂರ್ಣಗೊಳಿಸಬೇಕು ಮತ್ತು ಉಪನಗರಗಳಿಗೆ ವಿಮಾನಯಾನ ಸೌಲಭ್ಯ ಕಲ್ಪಿಸಬೇಕು. ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಖುದ್ದಾಗಿ ಮುಖ್ಯಮಂತ್ರಿಗಳೇ ವಿದೇಶಿ ಪ್ರವಾಸಕೈಗೊಂಡು ಉದ್ಯಮಿಗಳನ್ನು ಆಹ್ವಾನಿಸಬೇಕು ಎಂದು ಸಲಹೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ