ಐಎಂಎ ಹಗರಣವನ್ನು ಸಿಬಿಐಗೆ ವಹಿಸಬೇಕು-ಬಿಎಸ್‍ಪಿ ಒತ್ತಾಯ

ಬೆಂಗಳೂರು,ಜೂ.17- ಐಎಂಎ ಬಹುಕೋಟಿ ಹಗರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ನೇಮಿಸಿರುವ ಎಸ್‍ಐಟಿ ತನಿಖೆಯನ್ನು ರದ್ದುಗೊಳಿಸಿ ಸಿಬಿಐಗೆ ವಹಿಸಬೇಕೆಂದು ಬಹುಜನ ಸಮಾಜ ಪಾರ್ಟಿ ಕರ್ನಾಟಕ ರಾಜ್ಯ ಘಟಕ ಒತ್ತಾಯಿಸಿದೆ.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸಂಚಾಲಕ ಶೇರ್ಯಾರ್ ಖಾನ್, ಐಎಂಎ ಕಂಪನಿ ಮತ್ತು ಅದರ ಆಡಳಿತ ಮಂಡಳಿಯ ಎಲ್ಲರ ಆಸ್ತಿಪಾಸ್ತಿ ಮುಟುಗೋಲು ಹಾಕಿಕೊಂಡು ಹೂಡಿಕೆದಾರರಿಗೆ ಹಿಂದಿರುಗಿಸಲು ಸರ್ಕಾರ ಅಗತ್ಯ ತುರ್ತು ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಹಗರಣವು ಮೇಲ್ನೋಟಕ್ಕೆ ಕಾಣಿಸುವಷ್ಟು ಸರಳವಲ್ಲ. ಇದು ಆಳವಾಗಿ ಯೋಜಿಸಿ ಮಾಡಿರುವ ಮಹಾಮೋಸ. ಅತ್ಯಂತ ಕಡುಬಡವರಿಂದ ಹಿಡಿದು ಶ್ರೀಮಂತರು ಈ ಕಂಪನಿಯಲ್ಲಿ ಹಣ ಹೂಡಿದ್ದಾರೆ.ದೇಶ-ವಿದೇಶಗಳಲ್ಲೂ ಹೂಡಿಕೆದಾರರು ಇದ್ದಾರೆ. ಆದುದರಿಂದ ಬಹುಕೋಟಿ ಐಎಂಎ ಹಗರಣವನ್ನು ಭಾರತದ ಸರ್ವೋಚ್ಛ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ಆಗಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದರು.
ಗೋಷ್ಟಿಯಲ್ಲಿ ರಾಜ್ಯಾಧ್ಯಕ್ಷ ಹರಿರಾಮ್, ರಾಜ್ಯ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಖಜಾಂಚಿ ನಹಿದ ಸಲ್ಮಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಡಿ.ಬಸವರಾಜ್, ರಾಜ್ಯ ಕಾರ್ಯದರ್ಶಿ ಇಕ್ಬಾಲ್ ಷರೀಫ್ ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ