ಬೆಂಗಳೂರು,ಜೂ.17-ಪಕ್ಷ ಸಂಘಟನೆಯಲ್ಲಿ ನಾಗಾಲೋಟದಲ್ಲಿ ಓಡುತ್ತಿರುವ ಬಿಜೆಪಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಕೂಡ ಬಿರುಸಿನ ಚಟುವಟಿಕೆಗಳನ್ನು ಆರಂಭಿಸಿದ್ದು, ಬ್ಲಾಕ್ ಮಟ್ಟದಿಂದ ರಾಜ್ಯಮಟ್ಟದವರೆಗೆ ಪದಾಧಿಕಾರಿಗಳನ್ನು, ಸ್ಥಳೀಯ ಅಧ್ಯಕ್ಷರುಗಳನ್ನು ಬದಲಾವಣೆ ಮಾಡಿ ಸಂಘಟನೆಗೆ ಶಕ್ತಿ ತುಂಬಲು ಮುಂದಾಗಿದೆ.
ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರ ಸೂಚನೆ ಆಧರಿಸಿ ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಕೆಪಿಸಿಸಿಗೆ ಸ್ಪಷ್ಟ ಸೂಚನೆ ನೀಡಿದ್ದು, ಪದಾಧಿಕಾರಿಗಳು ಮತ್ತು ಜಿಲ್ಲಾಧ್ಯಕ್ಷರ ನೇಮಕಾತಿ ವೇಳೆ ಪಾರ್ಟ್ಟೈಮ್ ಸಂಘಟಕರನ್ನು ತೆಗೆದುಹಾಕಿ ಫುಲ್ಟೈಮ್ ಸಂಘಟಕರನ್ನು ನೇಮಿಸುವಂತೆ ತಾಕೀತು ಮಾಡಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿ ಅನುಭವಿಸಿದ್ದು, ಇನ್ನು ಮುಂದೆಯೂ ಪಕ್ಷ ಸಂಘಟನೆಯಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಅವನತಿ ಶತಸಿದ್ಧ. ಹಾಗಾಗಿ ಎಲ್ಲಾ ರಾಜ್ಯ ಘಟಕಗಳು ಪಕ್ಷ ಸಂಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಬಿಜೆಪಿಯಲ್ಲಿರುವಂತೆ ಫುಲ್ಟೈಮ್ ಸಂಘಟನಾಕಾರರನ್ನು ಪದಾಧಿಕಾರಿಗಳನ್ನಾಗಿ ನೇಮಿಸಬೇಕು, ರಾಜ್ಯ, ಜಿಲ್ಲೆ ಮತ್ತು ಬ್ಲಾಕ್ಕಾಂಗ್ರೆಸ್ ಮಟ್ಟದಲ್ಲಿ ಕನಿಷ್ಠ ಶೇ.50ರಷ್ಟು ಮಂದಿಯಾದರೂ ಫುಲ್ಟೈಮ್ ಕಾರ್ಯಕರ್ತರಿರಬೇಕು ಎಂದು ಸೂಚನೆ ನೀಡಲಾಗಿದೆ.
ಈಗಿನ ಪರಿಸ್ಥಿತಿಯಲ್ಲಿ ಮುಖಂಡರ ಶಿಫಾರಸ್ಸುಗಳನ್ನು ಆಧರಿಸಿ ಪದಾಧಿಕಾರಿಗಳ ನೇಮಕವಾಗುತ್ತಿದೆ. ಇನ್ನು ಮುಂದೆ ಶಿಫಾರಸ್ಸನ್ನು ಬದಿಗಿಟ್ಟು ಪಕ್ಷ ಸಂಘಟನೆಗೆ ಶ್ರಮ ಮತ್ತು ಸಮಯ ಮೀಸಲಿಡುವವರನ್ನು ಮಾತ್ರ ನೇಮಿಸಬೇಕು.ಸಾಮಾಜಿಕ ನ್ಯಾಯ ಹಾಗೂ ಇತರ ಶಿಫಾರಸುಗಳಿಗೆ ಶೇ.50ರಷ್ಟು ಮಾತ್ರ ಅವಕಾಶ ಕೊಡಬೇಕು ಎಂಬ ಸೂಚನೆ ನೀಡಲಾಗಿದೆ.
ಎಐಸಿಸಿ ಸೂಚನೆ ಆಧರಿಸಿ ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಈಗಾಗಲೇ ಸಭೆಗಳ ಮೇಲೆ ಸಭೆಗಳನ್ನು ನಡೆಸಿದ್ದು, ಪದಾಧಿಕಾರಿಗಳ, ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಈ ತಿಂಗಳಾಂತ್ಯದೊಳಗೆ ಸಂಘಟನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಲಿದ್ದು, ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರ ಮರು ನೇಮಕ ಮಾಡುವ ಸಾಧ್ಯತೆಗಳಿವೆ.