ಬೆಂಗಳೂರು, ಜೂ.17- ಆಮೇಗತಿಯಲ್ಲಿ ಸಾಗುತ್ತಿರುವ ಬನ್ನೇರುಘಟ್ಟ ರಸ್ತೆ ಅಗಲೀಕರಣ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವಂತೆ ಮೇಯರ್ ಗಂಗಾಂಬಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಬನ್ನೇರುಘಟ್ಟದ ಜಿಡಿಮರ ರಸ್ತೆಯಿಂದ ಏಳೂವರೆ ಕಿ.ಮೀ. ರಸ್ತೆಯನ್ನು 180 ಕೋಟಿ ರೂ. ವೆಚ್ಚದಲ್ಲಿ ಅಗಲೀಕರಣ ಮಾಡಿ ಅಕ್ಕಪಕ್ಕದ ಮೋರಿಗಳನ್ನು ಅಭಿವೃದ್ಧಿಗೊಳಿಸುವ ಯೋಜನೆಯನ್ನು ಪಾಲಿಕೆ ಕೈಗೆತ್ತಿಕೊಂಡಿತ್ತು.
ಅಗಲೀಕರಣದ ವೇಳೆ ಆಸ್ತಿ ಕಳೆದುಕೊಳ್ಳುವ ಮಾಲೀಕರಿಗೆ ಟಿಡಿಆರ್ ನೀಡಿ ವಶಪಡಿಸಿಕೊಳ್ಳುವಲ್ಲಿ ಅಧಿಕಾರಿಗಳು ವಿಳಂಬ ಮಾಡಿದ್ದು, ಈ ಕುರಿತು ಹಲವು ದೂರುಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ಶಾಸಕ ಸತೀಶ್ರೆಡ್ಡಿ, ಉಪಮೇಯರ್ ಭದ್ರೇಗೌಡ, ಆಡಳಿತ ಪಕ್ಷದ ನಾಯಕ ಅಬ್ದುಲ್ವಾಜಿದ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮೇಯರ್, ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.
ಟಿಡಿಆರ್ ನೀಡಿ ಭೂಮಿ ವಶಪಡಿಸಿಕೊಳ್ಳುವ ಸಂಬಂಧ ಹಾಗೂ ತ್ವರಿತ ಕಾಮಗಾರಿ ಕುರಿತಂತೆ ಸಂಜೆ ಅಧಿಕಾರಗಳ ಸಭೆ ಕರೆಯಲಾಗಿದೆ. ಸಭೆಯಲ್ಲಿ ಯೋಜನೆಯ ಸಾಧಕ-ಬಾಧಕಗಳ ಕುರಿತು ಚರ್ಚಿಸಿ ಆಯುಕ್ತರಿಗೆ ವಿವರಣೆ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ ಗಂಗಾಂಬಿಕೆ ಸುದ್ದಿಗಾರರಿಗೆ ತಿಳಿಸಿದರು.