ಬೆಂಗಳೂರು, ಜೂ.16- ಧರಣಿ ಕೈ ಬಿಟ್ಟರೆ ಮುಖ್ಯಮಂತ್ರಿಗಳು ನಿಮ್ಮ ಜತೆ ಮಾತುಕತೆ ನಡೆಸಲು ಸಿದ್ದರಿದ್ದಾರೆ ಎಂದು ಸಚಿವ ವೆಂಕಟರಾವ್ ನಾಡಗೌಡ ನಡೆಸಿದ ಸಂಧಾನ ಯಶಸ್ವಿಯಾಗಲಿಲ್ಲ.
ಬೆಳಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪತ್ರವನ್ನು ತೆಗೆದುಕೊಂಡು ವೆಂಕಟರಾವ್ ನಾಡಗೌಡ ಅವರು ಧರಣಿ ನಿರತ ಸ್ಥಳಕ್ಕೆ ಆಗಮಿಸಿದ್ದರು.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮತ್ತಿತರ ಮುಖಂಡರಿಗೆ ಮುಖ್ಯಮಂತ್ರಿಗಳ ಪತ್ರವನ್ನು ನೀಡಿದ ಸಚಿವರು, ನಿಮ್ಮ ಬೇಡಿಕೆಗಳ ಸಂಬಂಧ ಮುಖ್ಯಮಂತ್ರಿಗಳು ಮುಕ್ತವಾಗಿ ಚರ್ಚೆ ನಡೆಸಲು ಸಿದ್ದರಿದ್ದಾರೆ. ಅಲ್ಲದೆ, ಸರ್ಕಾರ ಈಗಾಗಲೇ ರೈತರ ಸಾಲ ಮನ್ನಾ ಕುರಿತಂತೆ ಅನೇಕ ತ್ವರಿತ ಕ್ರಮಗಳನ್ನು ಕೈಗೊಂಡಿದೆ ಎಂದು ವಿವರಿಸಿದರು.
ಆದರೆ, ಇದಕ್ಕೆ ಬಿಜೆಪಿ ನಾಯಕರು ಸೊಪ್ಪು ಹಾಕಿಲ್ಲ. ನಾವು ಜನರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದೇವೆ. ಘೋಷಣೆ ಮಾಡಿದ 45ಸಾವಿರ ಕೋಟಿ ಸಾಲ ಮನ್ನಾದಲ್ಲಿ ಈವರೆಗೂ ಕೇವಲ 9ಸಾವಿರ ಕೋಟಿ ಮಾತ್ರ ಮನ್ನಾ ಮಾಡಲಾಗಿದೆ. ಐಎಂಎ ಹಗರಣವನ್ನು ಮುಚ್ಚಲು ಎಸ್ಐಟಿ ತನಿಖೆಗೆ ವಹಿಸಲಾಗಿದೆ. ಬರಗಾಲ ಆವರಿಸಿದ್ದರೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಮುಖಂಡರು ಸಚಿವರ ಎದುರೇ ಅಸಮಾಧಾನ ಹೊರ ಹಾಕಿದರು.
ಸಂಧಾನ ನಡೆಸಲು ಬಂದಿದ್ದ ಸಚಿವ ವೆಂಕಟರಾವ್ ನಾಡಗೌಡ ಬಂದ ದಾರಿಗೆ ಸುಂಕವಿಲ್ಲದಂತೆ ಬರಿಗೈನಲ್ಲಿ ಹಿಂದಿರುಗಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ರೈತರ ಸಾಲ ಮನ್ನಾ ಮಾಡುವ ವಿಷಯದಲ್ಲಿ ಮುಕ್ತವಾಗಿದೆ. ಹಂತ ಹಂತವಾಗಿ ನಾವು ಸಾಲ ಮಾನ್ನಾ ಮಾಡುತ್ತಿದ್ದೇವೆ. ಬರಗಾಲ ಪರಿಸ್ಥಿತಿ ನಿಭಾಯಿಸಲು ಈಗಾಗಲೇ ನಾನಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರತಿ ಪಕ್ಷಗಳು ಮುಂದಿಟ್ಟಿರುವ ಬೇಡಿಕೆಗಳ ಬಗ್ಗೆ ಚರ್ಚೆ ಮಾಡಲು ಮುಖ್ಯಮಂತ್ರಿಗಳು ಮುಕ್ತ ಮನಸ್ಸು ಇಟ್ಟುಕೊಂಡಿದ್ದಾರೆ. ಆದರೆ, ಪ್ರತಿಪಕ್ಷದವರು ಈ ರೀತಿ ನಗತ್ಯವಾಗಿ ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.