ಗಿಡ ಮರಗಳನ್ನು ಬೆಳಸಿ-ಜಲಮೂಲಗಳನ್ನು ಸಂರಕ್ಷಿಸುವುದು ಅಗತ್ಯ-ಶಾಸಕ ಎಂ.ಕೃಷ್ಣಪ್ಪ

ಬೆಂಗಳೂರು, ಜೂ.16- ಪರಿಸರ ಸಂರಕ್ಷಣೆ ನಮ್ಮ ಮುಂದಿರುವ ದೊಡ್ಡ ಜವಾಬ್ದಾರಿ. ಮನುಕುಲದ ಉಳಿವಿಗಾಗಿ ಗಿಡ-ಮರಗಳನ್ನು ಬೆಳೆಸಿ ಇರುವ ಜಲಮೂಲಗಳನ್ನು ಸಂರಕ್ಷಿಸುವುದು ಅಗತ್ಯ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಹೇಳಿದರು.

ಬೆಂಗಳೂರು ನಗರ ಘಟಕ ಜಯಕರ್ನಾಟಕ ಸಂಘಟನೆ ವತಿಯಿಂದ ಆರಂಭಿಸಿರುವ ಹಸಿರು ಅಭಿಯಾನ ಕಾರ್ಯಕ್ರಮದ ಅಂಗವಾಗಿ ಇಂದು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಜಾಥಾ ಹಾಗೂ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಬೆಂಗಳೂರು ಹಿಂದೆ ಹಸಿರುಮಯವಾಗಿ ಉದ್ಯಾನವನ ನಗರಿ ಎಂದು ಹೆಸರು ಪಡೆದಿತ್ತು. ಶುದ್ಧ ಗಾಳಿ ಹಾಗೂ ಸುಂದರ ಪರಿಸರವಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ವಾಯುಮಾಲಿನ್ಯ, ಕೆರೆಗಳು ಕಲುಷಿತಗೊಂಡಿರುವುದು ಹಾಗೂ ಮರಗಳನ್ನು ಕಡಿಯುತ್ತಿರುವುದನ್ನು ನೋಡಿದರೆ ಮುಂದೆ ದೊಡ್ಡ ಆಪತ್ತು ಎದುರಾಗುತ್ತದೆ ಎಂಬ ಸೂಚನೆ ಇದೆ ಎಂದು ಹೇಳಿದರು.

ಈಗಾಗಲೇ ಕುಡಿಯುವ ನೀರಿನ ಸಮಸ್ಯೆ, ವಾಯುಮಾಲಿನ್ಯದಿಂದ ರೋಗ-ರುಜಿನಗಳು ಹರಡುವಂತಹ ಸಮಸ್ಯೆಗಳು ಎದುರಾಗಿವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಸಿರು ಬೆಳೆಸುವ ಕಾಯಕಕ್ಕೆ ಮುಂದಾಗಬೇಕೆಂದು ಹೇಳಿದರು.

ನಗರ ಘಟಕದ ಅಧ್ಯಕ್ಷ ಜಗದೀಶ್ ಮಾತನಾಡಿ, ಸಂಘಟನೆ ವತಿಯಿಂದ ಈಗ ಪರಿಸರ ಜಾಗೃತಿ ಅಭಿಯಾನವನ್ನು ಆರಂಭಿಸಲಾಗಿದೆ. ಇದನ್ನು ನಿರಂತರವಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಹಮ್ಮಿಕೊಳ್ಳುತ್ತಿದ್ದೇವೆ. ಕೇವಲ ಗಿಡ ನೆಡುವುದಲ್ಲದೆ ಪೋಷಿಸಿ, ಬೆಳೆಸುವ ಕಾರ್ಯವನ್ನು ನಮ್ಮ ಕಾರ್ಯಕರ್ತರು ಮಾಡುತ್ತಾರೆ ಎಂದು ಹೇಳಿದರು.

ಚಿತ್ರನಟಿ ಶುಭಾ ಪುಂಜಾ, ಕಾರ್ಯಾಧ್ಯಕ್ಷ ಯೋಗಾನಂದ್, ಶ್ರೀನಿವಾಸ್, ಮಹಿಳಾ ಘಟಕದ ಅಧ್ಯಕ್ಷ ಗಂಗರಾಜಮ್ಮ, ಹೊಟೇಲ್ ಘಟಕ ಅಧ್ಯಕ್ಷ ಉದಯ್‍ಶೆಟ್ಟಿ, ಮಾದೇಗೌಡ, ಯುವ ಘಟಕದ ಅಧ್ಯಕ್ಷ ಮಹೇಶ್, ಪದಾಧಿಕಾರಿಗಳಾದ ನಂಜುಂಡ, ಸುಮಂತ್, ಪ್ರಸನ್ನ, ಸುನಿಲ್, ಕನ್ನಡ ರಾಜು, ರಾಧಾಕೃಷ್ಣರಾಜು ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ