ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನಕ್ಕೆ ಇಲ್ಲಿನ ಓಲ್ಡ್ ಟ್ರಾಫೋರ್ಡ್ ಮೈದಾನ ಸಾಕ್ಷಿಯಾಗಲಿದೆ. 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಮುಖಾಮುಖಿಯಾಗಿದ್ದ ಉಭಯ ತಂಡಗಳು ಮತ್ತೊಮ್ಮೆ ಕಾದಾಡಲು ಸಜ್ಜಾಗಿವೆ.
ಇದುವರೆಗೂ ವಿಶ್ವಕಪ್ ಟೂರ್ನಿಯಲ್ಲಿ ಉಭಯ ತಂಡಗಳು 6 ಬಾರಿ ಮುಖಾಮುಖಿಯಾಗಿದ್ದು, ಭಾರತ ಎಲ್ಲಾ ಪಂದ್ಯಗಳಲ್ಲೂ ಗೆದ್ದು ಪ್ರಾಬಲ್ಯ ಮೆರೆದಿದೆ. ಈ ಹೈವೋಲ್ಟೇಜ್ ಮ್ಯಾಚ್ ಕಣ್ತುಂಬಿಕೊಳ್ಳಲು 60 ಸಾವಿರ ರುಪಾಯಿಗೂ ಹೆಚ್ಚು ಹಣ ನೀಡಿ ಅಭಿಮಾನಿಗಳು ಟಿಕೆಟ್ ಖರೀದಿಸಿದ್ದಾರೆ. ಆದರೆ ಇವೆಲ್ಲವುದರ ನಡುವೆ ಭಾನುವಾರ ಮ್ಯಾಂಚೆಸ್ಟರ್ನಲ್ಲಿ ಮಳೆ ಪಂದ್ಯಕ್ಕೆ ಅಡ್ಡಿಪಡಿಸುತ್ತಾ ಎನ್ನುವ ಬಗ್ಗೆ ಎಲ್ಲರು ತಲೆಕೆಡಿಸಿಕೊಂಡಿದ್ದಾರೆ. ಯಾಕೆಂದರೆ ಈಗಾಗಲೇ ವಿಶ್ವಕಪ್ ಟೂರ್ನಿಯಲ್ಲಿ 4 ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದನ್ನು ನಾವು ನೋಡಿದ್ದೇವೆ. ಭಾರತ-ನ್ಯೂಜಿಲೆಂಡ್ ನಡುವಿನ ಪಂದ್ಯವು ಟಾಸ್ ಕೂಡಾ ನಡೆಯದೇ ಪಂದ್ಯ ರದ್ದಾಗಿತ್ತು.
ಮ್ಯಾಂಚೆಸ್ಟರ್’ನಲ್ಲಿ ಭಾನುವಾರ ಮಳೆ ಬರುತ್ತಾ..?
ಹೌದು, ಭಾನುವಾರ ನಡೆಯಲಿರುವ ಪಂದ್ಯಕ್ಕೆ ವರುಣರಾಯ ಸ್ವಲ್ಪ ಅಡ್ಡಿಪಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆಕ್ಯುವೆದರ್ ಹವಾಮಾನ ವರದಿ ಪ್ರಕಾರ, ಸ್ಥಳೀಯ ಕಾಲಮಾನ, 12-01 ಗಂಟೆಗೆ [ಭಾರತೀಯ ಕಾಲಮಾನ 4.30ರಿಂದ 5.30ರ ಸುಮಾರಿಗೆ] ತುಂತುರು ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಯಿಂದ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಆರಂಭವಾಗಲಿದೆ.