ಬೆಂಗಳೂರು, ಜೂ.16- ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲೇಬೇಕೆಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್ನ ಕೆಲವು ಅತೃಪ್ತ ಶಾಸಕರ ಗುಂಪುಗಳು ನಿರಂತರ ಪ್ರಯತ್ನ ನಡೆಸುತ್ತಿದ್ದು, ಸರ್ಕಾರ ಪತನಗೊಳಿಸಿದರೆ ಮುಂದೇನು ಎಂಬ ಜಿಜ್ಞೆಸೆಯನ್ನು ಮೂಡಿಸಿವೆ.
ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್, ಡಾ.ಸುಧಾಕರ್, ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರುಗಳು ಪ್ರತ್ಯೇಕ ಗುಂಪುಗಳನ್ನು ಕಟ್ಟಿಕೊಂಡು ಸರ್ಕಾರದ ವಿರುದ್ದ ಕತ್ತಿಮಸೆಯುತ್ತಿದ್ದಾರೆ.
ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಆರಂಭವಾದ ಅತೃಪ್ತಿಯ ಸ್ಫೋಟಗಳು ಕ್ರಮೇಣ ವೈಯಕ್ತಿಕ ನಿಂದನೆ, ಹಠ, ದ್ವೇಷದ ರಾಜಕಾರಣಕ್ಕೆ ತಿರುಗಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲಾ ರಾಜಕಾರಣದ ಮೇಲೆ ಹಿಡಿತ ಸಾಧಿಸಲು ನಡೆಸಿದ ಪ್ರಯತ್ನದಲ್ಲಿ ವಿಫಲರಾಗಿ ಕಾಂಗ್ರೆಸ್ನ ಎಲ್ಲಾ ಮುಖಂಡರನ್ನು ಎದುರಾಕಿಕೊಂಡು ಪರಸ್ಪರ ಎದುರಿಗೆ ಕುಳಿತು ಚರ್ಚೆ ಮಾಡಲಾಗದಷ್ಟು ಸಂಬಂಧವುಂಟಾಗಿದೆ.
ಇನ್ನು ಡಾ.ಸುಧಾಕರ್ ಸಿದ್ದರಾಮಯ್ಯ ಅವರನ್ನು ನಂಬಿಕೊಂಡು ರಾಜಕಾರಣ ಮಾಡಿ ಇಂದು ಅತಂತ್ರ ಸ್ಥಿತಿಗೆ ತಲುಪಿದ್ದು, ಇತರ ಕಾಂಗ್ರೆಸ್ ನಾಯಕರ ಜತೆ ಮುಕ್ತವಾಗಿ ಚರ್ಚೆ ಮಾಡಲಾಗದಷ್ಟು ಅಸಮಾಧಾನವನ್ನು ಕೆಡಿಸಿಕೊಂಡಿದ್ದಾರೆ.
ಬಿ.ಸಿ.ಪಾಟೀಲ್ ಅವರಂತೂ ಸಚಿವ ಸ್ಥಾನದ ಭರವಸೆ ನೀಡಿ ವಂಚಿಸಲಾಗಿದೆ ಎಂದು ಹಾದಿಬೀದಿಯಲ್ಲಿ ಟೀಕೆ ಮಾಡುವ ಮೂಲಕ ಕಾಂಗ್ರೆಸ್ ಮುಖಂಡರ ಮೇಲೆ ಬಂಡಾಯ ಸಾರಿದ್ದಾರೆ.
ಹಿರಿಯ ಶಾಸಕರಾದ ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್, ರೋಷನ್ಬೇಗ್ ಅವರು ಬಹಿರಂಗ ಹೇಳಿಕೆ ನೀಡುವುದಷ್ಟೇ ಅಲ್ಲ ಸರ್ಕಾರದ ಲೋಪದೋಷಗಳನ್ನು ವಿರೋಧ ಪಕ್ಷದ ನಾಯಕರಿಗಿಂತಲೂ ಹೆಚ್ಚಾಗಿ ಬಹಿರಂಗ ಪಡಿಸುವ ಮೂಲಕ ಮೈತ್ರಿ ಕೂಟಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ.
ಈ ಮೂವರು ನಾಯಕರ ಅನುಭವಗಳ ಮುಂದೆ ಸರ್ಕಾರದಲ್ಲಿ ಸಚಿವರಾಗಿರುವವರ ಅನುಭವಗಳು ಶೂನ್ಯವಾಗಿದ್ದು, ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್ ಅವರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತತ್ತರಿಸುವಂತಾಗಿದೆ.
ಹಿರಿಯ ಅನುಭವಿ ಶಾಸಕರನ್ನು ಹೊರತು ಪಡಿಸಿ ಒಂದಷ್ಟು ಮಂದಿ ಹೊಸ ಶಾಸಕರು ಸರ್ಕಾರ ಪತನಗೊಳಿಸಬೇಕೆಂದು ಭಿನ್ನಮತೀಯ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸಿದ ಬಳಿಕೆ ಮುಂದೇನು ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರ ಇಲ್ಲ.
ಮೈತ್ರಿ ಕೂಟ ಪತನವಾದ ನಂತರ ಬಿಜೆಪಿ ಹೊಸದಾಗಿ ಸರ್ಕಾರ ರಚಿಸಬಹುದು. ಆದರೆ, ಅಲ್ಲಿ ನಮಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ವಿಶ್ವಾಸ ಯಾವ ಅತೃಪ್ತರಿಗೂ ಇಲ್ಲ. ಬಿಜೆಪಿಯಲ್ಲಿ ಸಾಕಷ್ಟು ಮಂದಿ ಸಚಿವ ಸ್ಥಾನ ಆಕಾಂಕ್ಷಿಗಳಿದ್ದಾರೆ. ಅವರನ್ನು ಬದಿಗಿಟ್ಟು ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಹೋದ ಎಷ್ಟು ಮಂದಿ ಶಾಸಕರಿಗೆ ಸಚಿವ ಸ್ಥಾನಕೊಡಲು ಸಾಧ್ಯ ಎಂಬ ಜಿಜ್ಞಾಸೆಗಳು ಕಾಡುತ್ತಿವೆ.
ಒಂದು ವೇಳೆ ತೀವ್ರ ಲಾಬಿ ನಡೆಸಿ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಿದರೂ ಅಲ್ಲಿಯೂ ಒಳಜಗಳಗಳು, ಭಿನ್ನಮತೀಯ ಚಟುವಟಿಕೆಗಳು ಭುಗಿಲೇಳುವುದು ಸಾಮಾನ್ಯ. ಅಂತಹ ಸಂದರ್ಭದಲ್ಲಿ ಸರ್ಕಾರ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ.
ಒಂದು ವೇಳೆ ನಮ್ಮ ರಾಜಕೀಯ ನಿರ್ಧಾರಗಳಿಂದ ಸರ್ಕಾರ ಪತನಗೊಂಡು ರಾಷ್ಟ್ರಪತಿ ಆಳ್ವಿಕೆ ಜಾರಿಯಾದರೆ ಇರುವ ಶಾಸಕ ಸ್ಥಾನವೂ ನಿರುಪಯುಕ್ತವಾಗುತ್ತದೆ.
ಮಧ್ಯಂತರ ಚುನಾವಣೆ ಎದುರಾದರೆ ಮತ್ತೆ ಜನರಿಗೆ ಮುಖ ತೋರಿಸುವುದು ಕಷ್ಟವಾಗುತ್ತದೆ. ಚುನಾವಣೆ ಎದುರಿಸಿ ಗೆದ್ದು ಬರುತ್ತೇವೆ ಎಂಬ ವಿಶ್ವಾಸವೂ ಇಲ್ಲ.
ಹೀಗಾಗಿ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕೈ ಹಾಕಬೇಕೋ, ಬೇಡವೋ ಎಂಬ ಗೊಂದಲದಲ್ಲಿ ಅತೃಪ್ತರು ಮುಳುಗಿದ್ದಾರೆ.
ಹೀಗಿರುವ ವ್ಯವಸ್ಥೆಯನ್ನೇ ಒಪ್ಪಿಕೊಂಡು ಇಲ್ಲೇ ಕೂಗಾಡಿ ಗದ್ದಲ ಮಾಡಿದರೆ ಮುಂದಿನ 7-8 ತಿಂಗಳಲ್ಲಿ ಸಂಪುಟ ಪುನಾರಚನೆಯಾದಾಗ ಅವಕಾಶ ಸಿಕ್ಕರೂ ಸಿಗಬಹುದು. ಬಿಜೆಪಿಗೆ ಹೋಗಿ ಮಾಡುವುದಾದರೂ ಏನು ಎಂಬ ಪ್ರಶ್ನೆಗಳನ್ನು ಕೆಲವು ಅತೃಪ್ತರು ಮುಂದಿಟ್ಟಿದ್ದಾರೆ.
ಒಟ್ಟಿನಲ್ಲಿ ಸರ್ಕಾರ ಪತನವಾಗಬೇಕು ಎಂಬ ಮಾತುಗಳನ್ನು ಹೇಳುತ್ತಿರುವ ಅತೃಪ್ತರ ಬಾಯಲ್ಲೇ ಮುಂದೇನು ಎಂಬ ಗೊಂದಲಗಳೂ ಕಾಡುತ್ತಿವೆ.