ಐಎಂಎ ವಂಚನೆ ಪ್ರಕರಣ-ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ಸರಿಯಿಲ್ಲ-ಎಚ್.ಕೆ.ಪಾಟೀಲ್

ಬೆಂಗಳೂರು, ಜೂ.16- ಜಿಂದಾಲ್‍ಗೆ ಭೂಮಿ ನೀಡಿಕೆ, ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಕುಡಿಯುವ ನೀರಿನ ದರ ಏರಿಕೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿ ಮುಜುಗರ ಉಂಟು ಮಾಡಿದ್ದ ಮಾಜಿ ಸಚಿವ ಎಚ್.ಕೆ.ಪಾಟೀಲ್ ಈಗ ಐಎಂಎ ಪ್ರಕರಣದಲ್ಲೂ ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ಹೇಳುವ ಮೂಲಕ ಮತ್ತಷ್ಟು ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಟ್ವಿಟರ್‍ನಲ್ಲಿ ನಾಲ್ಕು ಪುಟಗಳ ಬಹಿರಂಗ ಪತ್ರ ಬರೆದಿರುವ ಎಚ್.ಕೆ.ಪಾಟೀಲ್ ಅವರು, ಐಎಂಎ ಠೇವಣಿ ವಂಚನೆ ಪ್ರಕರಣದಲ್ಲಿ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ಸಾಲುತ್ತಿಲ್ಲ ಎಂಬ ಅಸಮಾಧಾನ ಹೊರ ಹಾಕಿದ್ದಾರೆ.

ತನಿಖೆ, ಶಿಕ್ಷೆಯಷ್ಟೇ ಅಲ್ಲ, ನೊಂದವರ ಬದುಕನ್ನು ಪುನಃ ಕಟ್ಟಿಕೊಡುವ ಸಾಮಾಜಿಕ ಹೊಣೆಗಾರಿಕೆಯನ್ನು ನಮ್ಮ ಸಮ್ಮಿಶ್ರ ಸರ್ಕಾರ ಯಶಸ್ವಿಯಾಗಿ ನಿಭಾಯಿಸಬೇಕಿದೆ. ಈಗ ತೆಗೆದುಕೊಂಡಿರುವ ಕ್ರಮಗಳು ಸಾಲುತ್ತಿಲ್ಲ 100 ದಿನಗಳಲ್ಲಿ ಠೇವಣಿದಾರರ ಹಣವನ್ನು ವಾಪಸ್ ಕೊಡಿಸಲು ಕ್ರಮ ಕೈಗೊಳ್ಳಬೇಕೆಂದು ಎಚ್.ಕೆ.ಪಾಟೀಲ್ ಟ್ವಿಟರ್‍ನಲ್ಲಿ ಹೇಳಿದ್ದಾರೆ.

ಅಮಾಯಕರ ಠೇವಣಿ ಹಣವನ್ನು ವಂಚಿಸಿದ್ದ ವಿನಿವಿಂಕ್, ತ್ರಿಪುರ ಚೀಟ್ಸ್, ಬಾದಾಮಿಯ ಭಜಂತ್ರಿ, ಆ್ಯಂಬಿಡೆಂಟ್ ಕಂಪೆನಿಗಳ ಪ್ರಕರಣಗಳಲ್ಲಿ ಹೂಡಿಕೆದಾರರು ನಲುಗಿ ಹೋಗಿ ಅವರ ಬದುಕಿನ ಆಸೆಗಳು ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಯಾರಿಗೂ ನ್ಯಾಯ ಸಿಕ್ಕಿಲ್ಲ. ಇಂತಹ ಪ್ರಕರಣಗಳಲ್ಲಿ ಬಿಗಿಯಾದ ಕ್ರಮ ತೆಗೆದುಕೊಳ್ಳಲು ಕಾನೂನಿನ ಕೊರತೆ ಇದೆ.ಯಾವುದೇ ಪಕ್ಷ ಅಥವಾ ಸರ್ಕಾರ ಅಧಿಕಾರದಲ್ಲಿದ್ದರೂ ಹೂಡಿಕೆದಾರರ ಹಿತ ರಕ್ಷಣೆಯಲ್ಲಿ ವಿಫಲವಾಗಿವೆ.

ಬ್ಲೇಡ್ ಕಂಪೆನಿಗಳ ಅವ್ಯವಹಾರ ಹೊರ ಬಂದಾಗ 10 ದಿನಗಳ ಕಾಲ ದೊಡ್ಡ ಚರ್ಚೆ ನಡೆಯುತ್ತದೆ. ನ್ಯಾಯಾಲಯದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದಿಲ್ಲ. ಹೂಡಿಕೆದಾರರ ಹಣ ವಾಪಸ್ ಬರದೇ ಇರುವುದನ್ನು ಮೂರು ದಶಕಗಳಿಂದಲೂ ಕಂಡಿದ್ದೇವೆ.

ಶೇ.10ರಷ್ಟು ಬಡ್ಡಿಯ ಆಸೆ ತೋರಿಸಿ ಐಎಂಎ ಕಂಪೆನಿ ರಾಜ್ಯಾದ್ಯಂತ ಸಾವಿರಾರು ಜನರಿಗೆ ಮೋಸ ಮಾಡಿದೆ. ಪ್ರಕರಣದಲ್ಲಿ ಕೇವಲ ತನಿಖೆಗಷ್ಟೇ ಒತ್ತು ನೀಡಲಾಗುತ್ತಿದೆ. ಹಣ ಕಳೆದುಕೊಂಡವರಿಗೆ ಸಹಾಯ ಸಿಗುತ್ತಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಬೇರೆ ವಿಷಯ. ಹೂಡಿಕೆದಾರರ ಕಣ್ಣು ಒರೆಸುವ ಕೆಲಸವಾಗಬೇಕಿದೆ.

ಸಹರಾ ಪ್ರಕರಣದಲ್ಲಿ ಹೂಡಿಕೆದಾರರ ಹಣವನ್ನು ಠೇವಣಿ ಮಾಡುವವರೆಗೂ ಅದರ ಮುಖ್ಯಸ್ಥ ಸುಬ್ರತೋರಾಯ್ ಜೈಲು ಶಿಕ್ಷೆ ಅನುಭವಿಸಬೇಕಾಯಿತು. 2019ರ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಸುಗ್ರಿವಾಜ್ಞೆಯಲ್ಲಿ ಹೂಡಿಕೆದಾರರಿಗೆ ವಂಚಿಸುವ ಇಂತಹ ಕಂಪೆನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ.

ತಪ್ಪಿತಸ್ಥರಿಗೆ 2ರಿಂದ 7 ವರ್ಷಗಳ ಶಿಕ್ಷೆ, 3ರಿಂದ 10 ಲಕ್ಷ ದಂಡ ವಿಧಿಸುವ ಅಧಿಕಾರವಿದೆ. ಈ ಸುಗ್ರೀವಾಜ್ಞೆಯಂತೆ 180 ದಿನಗಳ ಒಳಗಾಗಿ ಠೇವಣಿ ಹಣವನ್ನು ವಾಪಸ್ ಕೊಡಿಸಲು ಇರುವ ಅವಕಾಶವನ್ನು ರಾಜ್ಯ ಸರ್ಕಾರ ಬಳಸಿಕೊಳ್ಳಬೇಕು.

ಸುಗ್ರೀವಾಜ್ಞೆ ಕಲಂ 38ರ ಅನ್ವಯ ನಿಯಮಾವಳಿ ರೂಪಿಸಿ ಜಾರಿಗೊಳಿಸಬೇಕು. 30 ದಿನಗಳಲ್ಲಿ ತಪ್ಪಿತಸ್ಥರ ಆಸ್ತಿ ಜಪ್ತಿ ಮಾಡಿ ಹಣ ವಾಪಸ್ ಕೊಡಿಸಬೇಕು ಎಂದು ಎಚ್.ಕೆ.ಪಾಟೀಲ್ ಸುಮಾರು 10 ಸಲಹೆಗಳ ಸುದೀರ್ಘ ಪತ್ರವನ್ನು ಬರೆದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ