ಬೆಂಗಳೂರು, ಜೂ.16- ಜಿಂದಾಲ್ ಕಂಪೆನಿಗೆ ಭೂಮಿ ನೀಡಿರುವುದೂ ಸೇರಿದಂತೆ ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ಸಿಎಂ ಕಚೇರಿಗೆ ಮುತ್ತಿಗೆ ಹಾಕುವ ಬಿಜೆಪಿಯ ಹೋರಾಟಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಎಲ್ಲಾ ವಿಷಯಗಳ ಚರ್ಚೆಗೆ ಬನ್ನಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಕುಮಾರಸ್ವಾಮಿ ಅವರು, ಬಿಜೆಪಿ ನಾಯಕರ ಅಹೋರಾತ್ರಿ ಪ್ರತಿಭಟನೆಯನ್ನು ಗಮನಿಸಿದ್ದೇನೆ. ಸಿಎಂ ಕಚೇರಿಗೆ ಮುತ್ತಿಗೆ ಹಾಕುವ ಅವಶ್ಯಕತೆ ಇಲ್ಲ. ಜಿಂದಾಲ್ಗೆ ಭೂಮಿ ನೀಡಿರುವುದು, ಬರ ನಿಭಾಯಿಸಲು ಹಣ ಬಿಡುಗಡೆ ಮಾಡಿರುವುದು, ರೈತರ ಸಾಲ ಮನ್ನಾ ಸೇರಿದಂತೆ ಎಲ್ಲಾ ವಿಷಯಗಳ ಚರ್ಚೆಗೆ ನಾನು ಸಿದ್ದನಿದ್ದೇನೆ.
ಪ್ರಧಾನಿ ಸೇರಿದಂತೆ ಕೇಂದ್ರ ಸಚಿವರೊಂದಿಗೆ ಹಲವು ಸಮಸ್ಯೆಗಳ ಕುರಿತು ಚರ್ಚಿಸಿದ್ದೇನೆ. ನಿಮ್ಮ ಸಮಯ ತಿಳಿಸಿ ಚರ್ಚೆಗೆ ನಾನು ಸಿದ್ದನಿದ್ದೇನೆ ಎಂದು ಪಂಥಾಹ್ವಾನ ನೀಡಿದ್ದಾರೆ.
ಜಿಂದಾಲ್ಗೆ ಭೂಮಿ ನೀಡಿರುವುದನ್ನು ವಿರೋಧಿಸಿ ಬಿಜೆಪಿ ಕಳೆದೆರಡು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದೆ. ಇಂದು ಬಹುತೇಕ ಹೋರಾಟವನ್ನು ಕೊನೆಗೊಳಿಸುವ ಸಾಧ್ಯತೆ ಇದ್ದು, ಅದಕ್ಕೂ ಮುನ್ನ ಸಿಎಂ ಕಚೇರಿಗೆ ಮುತ್ತಿಗೆ ಹಾಕಲಾಗುತ್ತಿದೆ.
ಆದರೆ, ಬಿಜೆಪಿ ಹೋರಾಟದ ಬಗ್ಗೆ ನಯವಾದ ಮಾತುಗಳಲ್ಲೇ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳು, ಚರ್ಚೆಗೆ ಆಹ್ವಾನ ನೀಡುವ ಮೂಲಕ ಟಾಂಗ್ ನೀಡಿದ್ದಾರೆ.
ಬರ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿಲ್ಲ ಎಂಬ ಆರೋಪ ಇದೆ. ರೈತರ ಸಾಲ ಮನ್ನಾದ ವಿಷಯದಲ್ಲಂತೂ ಬಿಜೆಪಿ ಈವರೆಗೂ ಭಾರೀ ಟೀಕೆಗಳನ್ನು ಮಾಡಿಕೊಂಡು ಬರುತ್ತಿದೆಯೇ ಹೊರತು, ಕೇಂದ್ರದಿಂದ ಒಂದು ರೂ. ಕೊಡಿಸಿಲ್ಲ. ಕೇಂದ್ರ ಸರ್ಕಾರ ರೈತರಿಗೆ ಮತ್ತು ಕೃಷಿಕರಿಗೆ ಪೂರಕವಾದ ಯಾವುದೇ ಯೋಜನೆಗಳಿಗೂ ರಾಜ್ಯ ಸರ್ಕಾರಕ್ಕೆ ಸಹಕಾರ ನೀಡುತ್ತಿಲ್ಲ. ಹೀಗಿರುವಾಗ ಬಿಜೆಪಿಯವರು ಧರಣಿ ಮಾಡುವ ನೈತಿಕತೆಯನ್ನು ಹೊಂದಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಮೈತ್ರಿ ಸರ್ಕಾರದ ಸಚಿವರು ಕೇಳುತ್ತಿದ್ದಾರೆ.
ಈವರೆಗೂ ಸಚಿವರು ಮಾತ್ರ ಬಿಜೆಪಿ ಹೋರಾಟವನ್ನು ಪ್ರಶ್ನಿಸುತ್ತಿದ್ದರು.ಈಗ ನೇರವಾಗಿ ಮುಖ್ಯಮಂತ್ರಿಗಳೇ ಸವಾಲು ಹಾಕಿರುವುದು ಕುತೂಹಲ ಕೆರಳಿಸಿದೆ.
ಜಿಂದಾಲ್ಗೆ ಭೂಮಿ ನೀಡಿರುವ ವಿಷಯದಲ್ಲಂತಲೂ ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರ ಮೇಲೆ ಉರಿದು ಬೀಳುತ್ತಿದ್ದಾರೆ. ಹಿಂದೆ ಅಧಿಕಾರದಲ್ಲಿದ್ದಾಗ ಯಡಿಯೂರಪ್ಪ ಅವರೇ ಭೂಮಿ ಮಂಜೂರು ಮಾಡಿದ್ದರು. ಈಗ ಅವರೇ ವಿರೋಧಿಸುತ್ತಿದ್ದಾರೆ ಎಂಬ ಲೇವಡಿಗಳು ಕೇಳಿ ಬರುತ್ತಿವೆ.
ಬಿಜೆಪಿ ಕುಮಾರಸ್ವಾಮಿ ಅವರ ಸವಾಲಿಗೆ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.