ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ-ಪತ್ರ, ಚಳುವಳಿ ನಡೆಸಿದ ನೌಕರರು

ಬೆಂಗಳೂರು, ಜೂ.15- ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ದಾಸನಪುರದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೇಂದ್ರೀಯಕಾರ್ಯಾಗಾರ ಒಂದು ಮತ್ತು ನಾಲ್ಕನೆ ಘಟಕದ ನೌಕರರು ಪತ್ರ ಚಳವಳಿ ನಡೆಸಿದರು.

ಸಾರಿಗೆ ಇಲಾಖೆಯ ನಾಲ್ಕು ನಿಗಮಗಳಾದ ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಎನ್‍ಡಬ್ಲ್ಯೂಕೆಆರ್‍ಟಿಸಿ, ಎನ್‍ಇಕೆಆರ್‍ಟಿಸಿಗಳಲ್ಲಿ ನೌಕರರು ಹಗಲು-ರಾತ್ರಿ ಎನ್ನದೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣದಿಂದ ದೇಶದ ಇತರೆ ರಾಜ್ಯಗಳ ರಸ್ತೆ ಸಾರಿಗೆ ಸಂಸ್ಥೆಗಳಿಗಿಂತ ಉತ್ತಮವಾಗಿದೆ ಎಂದು ಹೆಸರು ಬಂದಿದೆ.

ಅಲ್ಲದೆ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ. ಆದರೆ, ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ನೋವುಗಳು ಮಾತ್ರ ಹೇಳತೀರದಾಗಿವೆ.

ಇತರೆ ಇಲಾಖೆ ನಿಗಮ-ಮಂಡಳಿಗಳಿಗೆ ಹೋಲಿಸಿದರೆ ಸಾರಿಗೆ ನೌಕರರ ವೇತನ, ಪಿಂಚಣಿ, ಆರೋಗ್ಯ ಭಾಗ್ಯ ಹಾಗೂ ಇತರೆ ಎಲ್ಲ ಸೌಲಭ್ಯಗಳೂ ಅತ್ಯಲ್ಪವಾಗಿವೆ.

ಇದರಿಂದ ಸಾರಿಗೆ ನೌಕರರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿ ದಿನೇ ದಿನೇ ಹದಗೆಡುತ್ತಿದೆ ಎಂದರು.

ಇದನ್ನೆಲ್ಲ ಮನಗಂಡು ಮುಖ್ಯಮಂತ್ರಿಗಳಿಗೆ ಚುನಾವಣಾ ಪೂರ್ವದಲ್ಲಿ ಮನವಿ ಕೂಡ ಸಲ್ಲಿಸಲಾಗಿತ್ತು. ಈ ವೇಳೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಆಶ್ವಾಸನೆ ನೀಡಿದ್ದೀರಿ. ಈಗ ನಿಮ್ಮದೇ ಸರ್ಕಾರವಿದೆ. ಹಾಗಾಗಿ ತಮ್ಮ ಬೇಡಿಕೆಗಳನ್ನು ಪರಿಶೀಲಿಸಿ ಈಡೇರಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದ್ದಾರೆ.

ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಿ ಸರ್ಕಾರಿ ನೌಕರರಿಗೆ ಇರುವಂತಹ ವೇತನ, ಪಿಂಚಣಿ, ಆರೋಗ್ಯ ಭಾಗ್ಯ ಸೇರಿದಂತೆ ಇತರೆ ಎಲ್ಲ ಸೌಲಭ್ಯಗಳನ್ನೂ ದೊರಕಿಸಿಕೊಡುವಂತೆ ಸಮಸ್ತ ಸಾರಿಗೆ ನೌಕರರ ಪರವಾಗಿ ಈ ಮೂಲಕ ಮನವಿ ಮಾಡಿದ್ದಾರೆ.

17ರಂದು ಸಂಜೆ 4.30ಕ್ಕೆ ಟೌನ್‍ಹಾಲ್ ಮುಂಭಾಗ ಬೃಹತ್ ಸಹಿ ಸಂಗ್ರಹ ಆಂದೋಲನ ಹಮ್ಮಿಕೊಳ್ಳಲಾಗಿದೆ. ಎಲ್ಲ ಸಾರಿಗೆ ನೌಕರರು ಪಾಲ್ಗೊಳ್ಳಬೇಕೆಂದು ಕೋರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ