ಪಕ್ಷನಿಷ್ಠರಾಗಿ ದುಡಿದ ಕಾರ್ಯಕರ್ತರು, ಹಿರಿಯರ ಕಡೆಗಣನೆ

ಬೆಂಗಳೂರು, ಜೂ.15-ಸಮ್ಮಿಶ್ರ ಸರ್ಕಾರದಲ್ಲಿ ಹಿರಿಯರನ್ನು ಕಡೆಗಣಿಸಲಾಗುತ್ತಿದೆ. ಮುಂದೆ ಯಾವುದೇ ರೀತಿಯ ಏರಿಳಿತಗಳಾದರೂ ಅದಕ್ಕೆ ನಾವು ಹೊಣೆ ಅಲ್ಲ ಎಂಬ ಸಂದೇಶವನ್ನು ಕಾಂಗ್ರೆಸ್ ಹಿರಿಯ ನಾಯಕರು ರವಾನಿಸಿದ್ದಾರೆ.

ಸಂಪುಟ ವಿಸ್ತರಣೆ ಬಳಿಕ ಬೆಂಗಳೂರಿನಲ್ಲಿ ಸಭೆ ನಡೆಸಿದ ಕೆಲವು ಹಿರಿಯ ಕಾಂಗ್ರೆಸ್ ನಾಯಕರು ಸಮ್ಮಿಶ್ರ ಸರ್ಕಾರದಲ್ಲಿನ ಲೋಪದೋಷಗಳನ್ನು ಬಿಡಿಬಿಡಿಯಾಗಿ ಬಿಚ್ಚಿಟ್ಟಿದ್ದು, ಪರಿಸ್ಥಿತಿ ಹೀಗೇ ಮುಂದುವರೆದರೆ ಕಾಂಗ್ರೆಸ್‍ಗೆ ತೀವ್ರ ಹಿನ್ನಡೆಯಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‍ನಲ್ಲಿ ಕೆಲವರ ಸರ್ವಾಧಿಕಾರಿ ಧೋರಣೆ ನಡೆಯುತ್ತಿದೆ. ರಾಜಕೀಯ ಜೀವನದುದ್ದಕ್ಕೂ ಪಕ್ಷನಿಷ್ಠರಾಗಿ ದುಡಿದ ಕಾರ್ಯಕರ್ತರು, ಹಿರಿಯರನ್ನು ಕಡೆಗಣಿಸಲಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಸಚಿವ ಸ್ಥಾನವನ್ನೂ ನೀಡುತ್ತಿಲ್ಲ, ಜೊತೆಗೆ ರಾಜಕೀಯ ದ್ವೇಷದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ.ಇತ್ತೀಚೆಗೆ ಪಕ್ಷಕ್ಕೆ ಬಂದವರನ್ನು ಮುಂದಿಟ್ಟುಕೊಂಡು ಪಕ್ಷನಿಷ್ಠರನ್ನು ಅಣಿಯುವ ಪ್ರಯತ್ನ ನಡೆಯುತ್ತಿದೆ. ಪ್ರಜಾಪ್ರಭುತ್ವದ ನೆಲೆಯಲ್ಲಿ ಪ್ರಶ್ನೆ ಮಾಡಿದವರ ಮೇಲೆ ವಿವಿಧ ಆರೋಪಗಳನ್ನು ಹೊರಿಸಿ ಬ್ಲ್ಯಾಕ್‍ಮೇಲ್ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹಿರಿಯ ನಾಯಕರು ಕಿಡಿಕಾರಿದ್ದಾರೆ.

ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ರೋಷನ್‍ಬೇಗ್, ಎಚ್.ಕೆ.ಪಾಟೀಲ್ ಅವರು ಹಿರಿಯ ನಾಯಕರ ಸಭೆಯ ನೇತೃತ್ವ ವಹಿಸಿದ್ದಾರೆ. ಹಲವಾರು ಬಾರಿ ಈ ನಾಯಕರು ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿದರು. ಆದರೆ ಅವರ ಜೊತೆ ಮಾತುಕತೆ ನಡೆಸಿ ಮನಸ್ತಾಪ ಬಗೆಹರಿಸುವ ಪ್ರಯತ್ನ ನಡೆದೇ ಇಲ್ಲ.

ಹೈಕಮಾಂಡ್ ನಾಯಕರು ತಮ್ಮ ಪಾಡಿಗೆ ತಾವಿದ್ದಾರೆ. ರಾಜ್ಯದಲ್ಲಿ ನೇತೃತ್ವ ವಹಿಸಿರುವ ನಾಯಕರು ದ್ವೇಷದ ರಾಜಕಾರಣ ಮಾಡುತ್ತಿದ್ದು, ತಮ್ಮ ಸುತ್ತಮುತ್ತ ಪಟಾಲವನ್ನು ಕಟ್ಟಿಕೊಂಡು ಹಿರಿಯ ನಾಯಕರ ತೇಜೋವಧೆ ಮಾಡುವುದು, ಅವಮಾನಿಸುವುದನ್ನು ಯಥೇಚ್ಛವಾಗಿ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರೆದರೆ ನಾವು ಗಂಭೀರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ನಾಯಕರ ಧೋರಣೆಗಳನ್ನು ಹೈಕಮಾಂಡ್ ಗಮನಕ್ಕೆ ತಂದು ನಿಯೋಗವೊಂದು ದೆಹಲಿಗೆ ತೆರಳುವ ಕುರಿತು ಚರ್ಚೆಗಳು ನಡೆದಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ