ಬೆಂಗಳೂರು, ಜೂ.15-ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ನಡೆಯುವ ನೇಮಕಾತಿಯಲ್ಲಿ ಸ್ಥಳೀಯರಿಗೂ ಅವಕಾಶ ಒದಗಿಸಲು ಅನುಕೂಲವಾಗುವಂತೆ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯ ನಿಯಮಗಳಿಗೆ ತಿದ್ದುಪಡಿ ಮಾಡುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದಾರೆ.
ನವದೆಹಲಿಯಲ್ಲಿಂದು ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿದ ಅವರು, ಬ್ಯಾಂಕ್ಗಳಿಗೆ ನೇಮಕಾತಿ ನಡೆಯುವ ಸಂದರ್ಭದಲ್ಲಿ ಸ್ಥಳೀಯ ಭಾಷಾ ಜ್ಞಾನ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ ದೊರೆಯಬೇಕು. ಬ್ಯಾಂಕಿಂಗ್ ಪರೀಕ್ಷೆಗಳು ಸಂವಿಧಾನದ ಮಾನ್ಯತೆ ಪಡೆದಿರುವ ಎಲ್ಲಾ 22 ಭಾಷೆಗಳಲ್ಲೂ ನಡೆಸಬೇಕು.
ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳ ನೇಮಕಾತಿಯಲ್ಲೂ ಸ್ಥಳೀಯರಿಗೆ ಅವಕಾಶ ಕಲ್ಪಿಸಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುವಂತೆ ಮನವಿ ಮಾಡಿದರು.
ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ರಾಜ್ ಸಂಸ್ಥೆಗಳಿಗೆ 2018-19ನೇ ಸಾಲಿಗೆ ಬಾಕಿ ಇರುವ 233 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆಯೂ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣಿ ಮಂಡಳಿಯು ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಈ ಸಂಸ್ಥೆಯ ಬ್ಯಾಂಕ್ ಖಾತೆಯಲ್ಲಿರುವ ಮೊತ್ತ ಹಾಗೂ ಬಡ್ಡಿಯನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸಲಾಗುತ್ತಿದೆ. ಕಾಫಿ ಮಂಡಳಿ, ರಬ್ಬರ್ ಮಂಡಳಿಗಳಂತೆ ಕಾರ್ಮಿಕರ ಕಲ್ಯಾಣ ಮಂಡಳಿಗೂ ಆದಾಯ ತೆರಿಗೆ ಕಾಯ್ದೆ 1961ರ ನಿಯಮ 10(21ಎ) ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ನೀಡುವಂತೆ ಮನವಿ ಮಾಡಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರೆ ಯೋಜನೆಯಡಿ ರಾಜ್ಯ ಅತ್ಯುತ್ತಮ ಸಾಧನೆ ಮಾಡಿದ್ದು, ಕೇಂದ್ರ ಸರ್ಕಾರದಿಂದ ಕೂಲಿ ಮುಂಗಡ ಸೇರಿದಂತೆ ಸುಮಾರು 1500 ಕೋಟಿ ರೂ. ಬಿಡುಗಡೆಯಾಗಬೇಕಿದ್ದು, ಈ ಅನುದಾನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಅವರು ಕೋರಿದರು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ಭಾಸ್ಕರ್, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣಾರೆಡ್ಡಿ ಉಪಸ್ಥಿತರಿದ್ದರು.