ಬೆಂಗಳೂರು, ಜೂ.15- ಪಶು ಸಂಗೋಪನಾ ಇಲಾಖೆ ವತಿಯಿಂದ ರೈತರಿಗೆ ನೀಡಲಾಗುವ ಪಶುಗಳಿಗೆ ಚಿಪ್ಗಳನ್ನು ಅಳವಡಿಸಲಾಗುವುದು ಎಂದು ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಸುಗಳಿಗೆ ಅಳವಡಿಸುವುದರಿಂದ ಹಲವು ರೈತರಿಗೆ ಹಸುಗಳನ್ನು ನೀಡಲು ಸಾಧ್ಯವಾಗುವುದಿಲ್ಲ. ಅಲ್ಲದೆ ಚಿಪ್ ಅಳವಡಿಸಿದ ಹಸುಗಳನ್ನು ಆರು ವರ್ಷಗಳ ಕಾಲ ಯಾರಿಗೂ ಮಾರಾಟ ಮಾಡಲಾಗುವುದಿಲ್ಲ. ಒಂದು ವೇಳೆ ಮಾರಾಟ ಮಾಡಿದರೆ ಯಾರಿಂದ ಯಾರಿಗೆ ಮಾರಾಟವಾಗಿದೆ ಎಂದು ಪತ್ತೆಹಚ್ಚಲು ಸಹಕಾರಿಯಾಗಿದೆ ಎಂದರು.
ಸಾಮಾನ್ಯ ವರ್ಗದವರಿಗೆ ಶೇ.25ರಷ್ಟು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.90ರಷ್ಟು ಸಹಾಯಧನವನ್ನು ನೀಡಲಾಗುವುದು.ಎರಡು ಹಸುಗಳನ್ನು ಒಂದು ಘಟಕದಂತೆ ಪರಿಗಣಿಸಿ 1.20 ಲಕ್ಷದವರೆಗೂ ಸಾಲದ ರೂಪದಲ್ಲಿ ಹಣ ನೀಡಲಾಗುತ್ತಿದ್ದು, ಪ್ರಸ್ತುತ 630 ಹಸುಗಳಿಗೆ ಚಿಪ್ಗಳನ್ನು ಅಳವಡಿಸಿದ್ದು, ಈ ಹಿಂದೆ ವಿತರಿಸಲಾಗಿರುವ ಹಸುಗಳಿಗೆ ಚಿಪ್ ಅಳವಡಿಸಬೇಕೇ, ಬೇಡವೇ ಎಂಬುದರ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಪಶು ಸಂಗೋಪನಾ ಇಲಾಖೆಯನ್ನು ಕ್ರಿಯಾಶೀಲಗೊಳಿಸಲು ಸಾಫ್ಟ್ವೇರ್ವೊಂದನ್ನು ಅಭಿವೃದ್ಧಿಗೊಳಿಸಲಾಗುತ್ತಿದ್ದು, ಇದರಲ್ಲಿ ವೈದ್ಯರ ಮಾಹಿತಿ ಹಾಗೂ ಪಶು ಆಸ್ಪತ್ರೆಗಳಲ್ಲಿ ಔಷಧಿ, ದಾಸ್ತಾನು ಕೊರತೆ ಮಾಹಿತಿ ಲಭ್ಯವಾಗಲಿದೆ.
ಸದ್ಯದಲ್ಲೇ ಇಲಾಖೆಯ ವೆಬ್ಸೈಟ್ ಸಹ ಉದ್ಘಾಟಿಸಲಾಗುವುದು.ಪಶು ವೈದ್ಯರ ಬೇಡಿಕೆಗಳನ್ನು ಆನ್ಲೈನ್ನಲ್ಲಿ ಸಲ್ಲಿಸಬಹುದಾಗಿದೆ. ಹಾಲಿನ ಖರೀದಿ ಮತ್ತು ಮಾರಾಟ ದರವನ್ನು ಆಯಾಯಾ ಋತುಮಾನಕ್ಕೆ ತಕ್ಕಂತೆ ಆಯಾಯ ಘಟಕ ಹಾಗೂ ಕೆಎಂಎಫ್ ನಿರ್ಧರಿಸಲಿದೆ. ಇದರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದರು.