ಬೆಂಗಳೂರು, ಜೂ.14-ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಿದ ಮಾತ್ರಕ್ಕೆ ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡಲಾಗುತ್ತದೆ ಎಂಬ ಭಾವನೆ ಬೇಡ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಿದ್ದ ಒಂದು ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿ ಆಂಗ್ಲ ಮಾಧ್ಯಮ ವಿಭಾಗ ಪ್ರಾರಂಭ, 100 ಹೊಸ ಕೆಪಿಎಸ್(ಕರ್ನಾಟಕ ಪಬ್ಲಿಕ್ ಶಾಲೆ)ಗಳ ಪ್ರಾರಂಭ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡದ ಕಾಳಜಿ ಬಗ್ಗೆ ಯಾರಿಗೂ ಅನುಮಾನ ಬೇಡ. ಕನ್ನಡ ತಾಯಿ ನಮ್ಮೊಳಗೆ ಇದ್ದಾರೆ. ಕನ್ನಡವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡುವುದಿಲ್ಲ. ನಾವೆಲ್ಲರೂ ಸರ್ಕಾರಿ ಶಾಲೆಯಲ್ಲೇ ಓದಿದವರು. ಸರ್ಕಾರಿ ಶಾಲೆಯಲ್ಲೂ ಒಳ್ಳೆಯ ಶಿಕ್ಷಣ ಸಿಗುತ್ತದೆ. ಸರ್ಕಾರಿ ಶಾಲೆಗಳನ್ನು ನಿರ್ಲಕ್ಷ್ಯ ಮಾಡಬಾರದು ಅವು ಮುಂದಿನ ಪ್ರಜೆಗಳನ್ನು ರೂಪಿಸುವ ಕೇಂದ್ರಗಳಾಗಬೇಕು ಎಂದರು.
ಒಂದು ಸಾವಿರ ಆಂಗ್ಲ ಶಾಲೆ ಪ್ರಾರಂಭ ಮಾಡುವ ಐತಿಹಾಸಿಕ ತೀರ್ಮಾನ ಕೈಗೊಂಡ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಅಭಿನಂದಿಸುತ್ತೇನೆ.
ಅನೇಕ ಗೊಂದಲಗಳ ನಡುವೆಯೂ ಅವರು ಇಂತಹ ತೀರ್ಮಾನ ಕೈಗೊಂಡಿದ್ದಾರೆ. ಶಿಕ್ಷಣದಿಂದ ಮನುಷ್ಯ ಮಾತ್ರವಲ್ಲ, ಸಮಾಜ ಹಾಗೂ ದೇಶವನ್ನೂ ಕೂಡ ಬದಲಾವಣೆ ಮಾಡಬಹುದು. ಯಾವುದೇ ಅಭಿವೃದ್ಧಿ ಹೊಂದಿದ ದೇಶವನ್ನು ಗಮನಿಸಿದರೆ ಆ ರಾಷ್ಟ್ರದಲ್ಲಿ ಶಿಕ್ಷಣ ಬಹುದೊಡ್ಡ ಬದಲಾವಣೆ ಮಾಡಿರುತ್ತದೆ.
ನಮ್ಮ ರಾಷ್ಟ್ರದ ಸರಾಸರಿ ಸಾಕ್ಷರತೆ ಪ್ರಮಾಣ ಶೇ.78ರಷ್ಟಿದೆ. ಇದು ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಕಡಿಮೆ ಸಾಧನೆಯಲ್ಲ ಎಂದು ಹೇಳಿದರು.
ಆಧುನಿಕ ಜಗತ್ತಿನಲ್ಲಿ ಭಾರತವನ್ನು ಶಿಕ್ಷಣದ ಮೂಲಕವೇ ಗುರುತಿಸಲಾಗುತ್ತದೆ. ಜಗತ್ತಿನ ಯಾವೊಂದು ಮೂಲೆಯಲ್ಲಿ ನೋಡಿದರೂ ಒಬ್ಬ ವೈದ್ಯ, ಇಲ್ಲ ಒಬ್ಬ ಎಂಜಿನಿಯರ್ ಇರುತ್ತಾರೆ. ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡದಿದ್ದರೆ ಬಹಳಷ್ಟು ಮಂದಿ ಅಂತಹ ಸಾಧನೆ ಮಾಡುತ್ತಿರಲಿಲ್ಲ ಎಂಬುದನ್ನು ಗಮನಿಸಬೇಕು ಎಂದರು.
ಶಾಲೆಗಳ ಮೂಲಸೌಕರ್ಯಾಭಿವೃದ್ಧಿಗೆ 1200 ಕೋಟಿ ರೂ.ಒದಗಿಸಿರುವುದು ಪ್ರಶಂಸಾರ್ಹ ಎಂದರು.
ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಾಲಾ ಕಿಟ್ ಹಾಗೂ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಚಿವ ಸಾ.ರಾ.ಮಹೇಶ್, ಮಾಜಿ ಸಚಿವರಾದ ರೋಷನ್ಬೇಗ್, ಬಸವರಾಜ್ ಹೊರಟ್ಟಿ, ಶಾಸಕರಾದ ದೇವಾನಂದ ಚೌಹಾಣ್, ನಿಸರ್ಗ ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಭೋಜೇಗೌಡ, ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಚೌಡರೆಡ್ಡಿ, ಬಿಬಿಎಂಪಿ ಉಪಮೇಯರ್ ಭದ್ರೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಸಿ.ಜಾಫರ್, ಸಮಗ್ರ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಡಾ.ಎಂ.ಟಿ.ರೇಜು ಮತ್ತಿತರರು ಗಣ್ಯರು ಪಾಲ್ಗೊಂಡಿದ್ದರು.