ಅಧಿಕಾರಕ್ಕಿಂತ ಸರ್ಕಾರ ಉಳಿಸಿಕೊಳ್ಳುವುದು ಮುಖ್ಯ-ಮಾಜಿ ಸಚಿವ ಬಸವರಾಜ ಹೊರಟ್ಟಿ

ಬೆಂಗಳೂರು, ಜೂ.14-ತಮ್ಮ ಅಧಿಕಾರಕ್ಕಿಂತ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉಳಿಸಿಕೊಳ್ಳುವುದು ಮುಖ್ಯ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಎಲ್ಲಾ ಶಾಸಕರು ಸಚಿವರಾಗಲು ಸಾಧ್ಯವಿಲ್ಲ. ಸರ್ಕಾರವನ್ನು ಉಳಿಸಿಕೊಳ್ಳಲು ವರಿಷ್ಠರ ತೀರ್ಮಾನಕ್ಕೆ ಹಿರಿಯರಾಗಿ ನಮ್ಮ ಸಹಮತವೂ ಇದೆ ಎಂದರು.

ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ಮತ್ತು ದಲಿತರಿಗೆ ಕೊಡಬೇಕೆಂಬ ಚರ್ಚೆಯಾಗಿತ್ತು. ಆಗಲೇ ಎರಡು ಸಚಿವ ಸ್ಥಾನ ಭರ್ತಿ ಮಾಡಿದ್ದರೆ ಸರಿ ಇತ್ತು. ಯಾವ ಕಾರಣಕ್ಕಾಗಿ ಉಳಿಸಿಕೊಂಡಿದ್ದರೋ ಎಂಬುದು ತಮಗೆ ಗೊತ್ತಿಲ್ಲ. ಸಚಿವ ಸ್ಥಾನ ಭರ್ತಿ ಮಾಡದೆ ಉಳಿಸಿಕೊಂಡಿದ್ದು ತಪ್ಪು ಎಂಬುದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು.

ವಿಧಾನಪರಿಷತ್ ಮಾಜಿ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ನೀಡಿರುವ ಮೈತ್ರಿ ಸರ್ಕಾರ ಪತನವಾಗುತ್ತೆ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಹೊರಟ್ಟಿ ಅವರು, ಸಭಾಧ್ಯಕ್ಷರಾಗಿದ್ದವರು ಈ ರೀತಿ ಹೇಳುವುದು ಸರಿಯಲ್ಲ. ಒಂದು ಪಕ್ಷದಲ್ಲಿ ಇದ್ದ ಮೇಲೆ ಆ ಪಕ್ಷದ ಶಿಸ್ತನ್ನು ಪಾಲಿಸಬೇಕು. ಅಸಮಾಧಾನಗೊಂಡು ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

ವಿಶ್ವನಾಥ್ ಭೇಟಿ:
ಮಾಜಿ ಸಚಿವ ಎಚ್.ವಿಶ್ವನಾಥ್ ಅವರು ಇಂದು ಬೆಳಗ್ಗೆ ತಮ್ಮನ್ನು ಭೇಟಿಯಾಗಿದ್ದರು. ಮಾಜಿ ಕೇಂದ್ರ ಸಚಿವ ಶ್ರೀನಿವಾಸ್‍ಪ್ರಸಾದ್ ಅವರನ್ನು ವೈಯಕ್ತಿಕ ಕಾರಣಕ್ಕೆ ಭೇಟಿಯಾಗುವುದಾಗಿ ಹೇಳಿದ್ದರು. ಅದರಂತೆ ಭೇಟಿಯಾಗಿದ್ದಾರೆ. ಅದರಲ್ಲೇನು ವಿಶೇಷವಿಲ್ಲ. ಅವರಿಬ್ಬರು ಸ್ನೇಹಿತರು ಹಾಗಾಗಿ ಭೇಟಿಯಾಗಿದ್ದರು. ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿ ಆಸೆ ಈಡೇರುವುದಿಲ್ಲ. ಏಕೆಂದರೆ ಯಾವ ಶಾಸಕರೂ ಚುನಾವಣೆಗೆ ಹೋಗಲು ಸಿದ್ಧರಿಲ್ಲ. ರಾಜೀನಾಮೆ ಕೊಟ್ಟರೆ ಮತ್ತೆ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂಬ ಖಾತರಿ ಯಾರಿಗೂ ಇಲ್ಲ ಎಂದು ಹೊರಟ್ಟಿ ಅಭಿಪ್ರಾಯಪಟ್ಟರು.

ಲೋಕಸಭೆ ಚುನಾವಣೆ, ವಿಧಾನಸಭೆ ಚುನಾವಣೆಯೇ ಬೇರೆ. ಒಂದು ವೇಳೆ ಶಾಸಕರು ರಾಜೀನಾಮೆ ಕೊಟ್ಟಿದ್ದೇ ಆದರೆ ಸರ್ಕಾರ ಅಲ್ಪಮತಕ್ಕೆ ಕುಸಿಯುತ್ತದೆ. ಆಗ ರಾಷ್ಟ್ರಪತಿ ಆಳ್ವಿಕೆ ಹೇರುವ ಸಾಧ್ಯತೆ ಇದೆ. ಆನಂತರ ಬಿಜೆಪಿ ಚುನಾವಣೆಗೆ ಹೋಗಿ ಬಹುಮತ ಗಳಿಸುವ ಪ್ರಯತ್ನ ಮಾಡುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಅವರು ವ್ಯಾಖ್ಯಾನಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಮೇಲಿನ ಅಭಿಮಾನಕ್ಕೆ ಒಂದು ಸ್ಥಾನವನ್ನು ಇಟ್ಟುಕೊಂಡಿದ್ದರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರೀತಿ ಜಾಸ್ತಿಯಾದರೆ ಪಚನವಾಗುವುದಿಲ್ಲ. ನಮ್ಮ ಮೇಲಿನ ಅಭಿಮಾನಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಈಗಾಗಲೇ ತಾವು ಮಾಜಿ ಸಚಿವರಾಗಿದ್ದು, ಮತ್ತೊಮ್ಮೆ ಮಾಜಿ ಸಚಿವ ಕರೆಸಿಕೊಳ್ಳುವ ಆಸೆ ಇಲ್ಲ. ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಆಯ್ಕೆಯಾಗಿದ್ದು, 2020 ರವರೆಗೂ ನಮ್ಮ ಅವಧಿ ಇದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ