ರಾಜ್ಯಪಾಲ ವಿ.ಆರ್.ವಾಲಾರವರ ಅಧಿಕಾರವಧಿಗೆ ಎರಡು ತಿಂಗಳು ಬಾಕಿ-ಹೊಸ ರಾಜ್ಯಪಾಲರ ಬಗ್ಗೆ ಮೂಡಿರುವ ಕುತೂಹಲ

ಬೆಂಗಳೂರು, ಜೂ.14-ಕರ್ನಾಟಕದ ರಾಜ್ಯಪಾಲ ವಿ.ಆರ್.ವಾಲಾ ಅವರ ಅಧಿಕಾರಾವಧಿ ಮುಗಿಯಲು ಇನ್ನು ಎರಡು ತಿಂಗಳು ಬಾಕಿ ಇದ್ದು, ತೆರವಾಗಲಿರುವ ಈ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಕುತೂಹಲ ಕೆರಳಿಸಿದೆ.

ಮೂರು ದಿನಗಳ ಹಿಂದೆಯಷ್ಟೆ ವಿ.ಆರ್.ವಾಲಾ ಅವರು ನವದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್‍ಷಾ ಅವರನ್ನು ಭೇಟಿ ಮಾಡಿ ಶುಭ ಕೋರಿದ್ದರು.

ಇದೊಂದು ಸೌಹಾರ್ದಯುತ ಭೇಟಿ ಎಂಬ ಮಾತುಗಳು ಕೇಳಿ ಬಂದಿದೆಯಾದರೂ ರಾಜಭವನದ ಮೂಲಗಳು ಬೇರೆಯಾದ ಅರ್ಥವನ್ನೇ ಹೇಳುತ್ತಿವೆ.

ನಿವೃತ್ತಿಯ ಅಂಚಿನಲ್ಲಿರುವ ವಾಲಾ ಅವರು ತಮ್ಮನ್ನೇ ಮತ್ತೊಂದು ಅವಧಿಗೆ ರಾಜ್ಯಪಾಲರಾಗಿ ಮುಂದುವರೆಸಲು ಅವಕಾಶ ನೀಡುವಂತೆ ಹಾಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಅಮಿತ್‍ಷಾ ಅವರಲ್ಲಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ರಾಜ್ಯಪಾಲರಾದ ಬಳಿಕ ಸದಾ ವಿವಾದಗಳಿಂದ ದೂರ ಉಳಿದುಕೊಂಡು ಸರ್ಕಾರ ಮತ್ತು ರಾಜಭವನದ ನಡುವೆ ಸೌಹಾರ್ದಯುತವಾದ ವಾತಾವರಣವನ್ನು ಮೂಡಿಸಿದ ಕೀರ್ತಿ ವಾಲಾ ಅವರಿಗೆ ಸಲ್ಲುತ್ತದೆ.

ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ಅಂದಿನ ರಾಜ್ಯಪಾಲ ಹಂಸರಾಜ್ ಭರದ್ವಾಜ್ ಕೆಲವು ವಿವಾದಾತ್ಮಕ ತೀರ್ಮಾನಗಳಿಂದ ಸ್ವತಃ ಕಾಂಗ್ರೆಸ್ ಮತ್ತು ಅಂದಿನ ಯುಪಿಎ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು.

ಕಾರ್ಯಾಂಗದ ಮುಖ್ಯಸ್ಥರೂ ಆಗಿರುವ ರಾಜ್ಯಪಾಲರು ನಿಷ್ಪಕ್ಷಪಾತಿಯಾಗದೆ ಪಕ್ಷಪಾತಿಯಾಗಿ ವರ್ತಿಸುತ್ತಾರೆ ಎಂಬ ಆರೋಪ ಕೇಳಿ ಬಂದಿತ್ತು.ಹೀಗಾಗಿ ಕೇಂದ್ರದಲ್ಲಿ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಅವರನ್ನು ಸ್ಥಾನದಿಂದ ವಿಮುಕ್ತಗೊಳಿಸಲಾಯಿತು.

ಗುಜರಾತ್‍ನ ಹಣಕಾಸು ಖಾತೆ ಸೇರಿದಂತೆ ವಿವಿಧ ಖಾತೆಗಳನ್ನು ನಿಭಾಯಿಸಿ ದಾಖಲೆಯ ಬಜೆಟ್ ಮಂಡಿಸಿ ವಿಧಾನಸಭೆ ಸ್ಪೀಕರ್ ಆಗಿದ್ದ ವಿ.ಆರ್.ವಾಲಾ ಮೇಲೆ ಯಾವುದೇ ರೀತಿಯ ಗುರುತರ ಆರೋಪಗಳಿಲ್ಲ.

ಸರ್ಕಾರ ಹಾಗೂ ರಾಜಭವನದ ನಡುವೆ ಒಂದು ರೀತಿ ಹೊಂದಾಣಿಕೆ ವಾತಾವರಣ ಸೃಷ್ಟಿಸಿದ ವಾಲಾ ಅವರು ಪುನಃ ಮತ್ತೊಂದು ಬಾರಿಗೆ ರಾಜ್ಯಪಾಲರಾಗಿ ಮುಂದುವರೆಯುವ ಇಂಗಿತವನ್ನು ಅಮಿತ್ ಷಾ ಬಳಿ ಹೊರ ಹಾಕಿದ್ದಾರೆ. ಯಾವುದೇ ರಾಜ್ಯದ ರಾಜ್ಯಪಾಲರನ್ನು ವರ್ಗಾವಣೆ ಮಾಡುವುದು, ನೇಮಕ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇರುತ್ತದೆಯಾದರೂ ನಿಯೋಜಿಸುವ ಅಧಿಕಾರ ಮಾತ್ರ ಗೃಹ ಇಲಾಖೆಗೆ ಸೇರಿರುತ್ತದೆ.

ಹೀಗಾಗಿ ವಾಲಾ ಅವರು ಪುನಃ ಮತ್ತೊಂದು ಅವಧಿಗೆ ಮುಂದುವರೆಯಬೇಕೆಂಬ ಇಚ್ಛೆ ಹೊಂದಿದ್ದು, ಇದಕ್ಕಾಗಿಯೇ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ದೇಶದಲ್ಲೇ ಅತ್ಯಂತ ಸಂಪದ್ಭರಿತ ಸುರಕ್ಷಿತವಾದ ರಾಜಭವನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಡುವೆ ಕರ್ನಾಟಕದ ರಾಜ್ಯಪಾಲರ ಹುದ್ದೆ ಮೇಲೆ ಅನೇಕರು ಕಣ್ಣಿಟ್ಟಿದ್ದಾರೆ.

ಬಿಜೆಪಿಯಲ್ಲಿ 75 ವರ್ಷ ದಾಟಿದವರಿಗೆ ಪಕ್ಷದಲ್ಲಿ ಯಾವುದೇ ರೀತಿಯ ಸ್ಥಾನ ಮಾನ ನೀಡುತ್ತಿಲ್ಲ. ಬದಲಿಗೆ ಮಾರ್ಗದರ್ಶಕ ಮಂಡಳಿಯಲ್ಲಿ ಅವರು ಪಕ್ಷಕ್ಕೆ ಸೂಕ್ತವಾದ ಸಲಹೆ, ಮಾರ್ಗದರ್ಶನ ನೀಡಬಹುದು. ಬಿಜೆಪಿ ಭೀಷ್ಮ ಪಿತಾಮಹ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಷಿ ಸಾಲಿಗೆ ಈಗ ಅನಾರೋಗ್ಯದ ನೆಪ ಹೇಳಿ ಕಳೆದ ಚುನಾವಣೆಯಲ್ಲಿ ಟಿಕೆಟ್ ನೀಡದೆ ವಂಚಿತರಾಗಿರುವ ಕೇಂದ್ರದ ಮಾಜಿ ಸಚಿವೆ ಸುಷ್ಮಾಸ್ವರಾಜ್, ಲೋಕಸಭೆ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್, ಉಮಾಭಾರತಿ ಸೇರಿದಂತೆ ಅನೇಕರ ಹೆಸರುಗಳು ಕೇಳಿ ಬರುತ್ತಿವೆ.

ವಿ.ಆರ್.ವಾಲಾ ರಾಜ್ಯಪಾಲರಾಗಿ ಮುಂದುವರೆದರೂ ಅವರನ್ನು ಬೇರೊಂದು ರಾಜ್ಯಕ್ಕೆ ವರ್ಗಾವಣೆಗೊಳಿಸುವ ಸಂಭವವಿದೆ. ಲೋಕಸಭೆಯ ಮಾಜಿ ಸ್ಪೀಕರ್ ಮಧ್ಯಪ್ರದೇಶದ ಇಂಧೋರ್ ಲೋಕಸಭಾ ಕ್ಷೇತ್ರದಿಂದ ಎಂಟು ಬಾರಿ ಗೆದ್ದು ದಾಖಲೆ ನಿರ್ಮಿಸಿದ್ದ ಸುಮಿತ್ರಾ ಮಹಾಜನ್‍ಗೆ ಕರ್ನಾಟಕದ ರಾಜ್ಯಪಾಲರ ಹುದ್ದೆ ಒಲಿಯುವ ಲಕ್ಷಣಗಳು ಗೋಚರಿಸಿವೆ.

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡದಿದ್ದರೂ ಮಧ್ಯಪ್ರದೇಶದಲ್ಲಿ ಪಕ್ಷದ ಪರ ಸಕ್ರಿಯವಾಗಿ ಪ್ರಚಾರ ನಡೆಸಿದ್ದರು. ತಮ್ಮ ತವರು ಕ್ಷೇತ್ರ ಇಂಧೋರ್‍ನಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದಲ್ಲದೆ, ರಾಜ್ಯದ 29 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 28 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿತ್ತು.

ಮುಂದೊಂದು ದಿನ ನಿಮಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗಲಿದೆ ಎಂದು ನರೇಂದ್ರ ಮೋದಿ ಮತ್ತು ಅಮಿತ್‍ಷಾ ಆಶ್ವಾಸನೆ ನೀಡಿದ್ದರಿಂದಲೇ ಸುಮಿತ್ರಾ ಮಹಾಜನ್ ಟಿಕೆಟ್ ಸಿಗದಿದ್ದರೂ ತುಟಿಕ್-ಪಿಟಿಕ್ ಎಂದಿರಲಿಲ್ಲ. ಈ ಬೆಳವಣಿಗೆಗಳೇ ಅವರನ್ನು ಕರ್ನಾಟಕ ರಾಜ್ಯಪಾಲರ ಹುದ್ದೆಗೆ ಪರಿಗಣಿಸುವಂತೆ ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ