![sudhakar-resized](http://kannada.vartamitra.com/wp-content/uploads/2019/06/sudhakar-resized-572x381.jpg)
ಬೆಂಗಳೂರು; ಇಂದು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ವಿಸ್ತರಣೆ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಸಂಪುಟ ವಿಸ್ತರಣೆ ಬಳಿಕ ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಬಂಡಾಯದ ಸುಳಿವು ನೀಡಿದ್ದು, ಮೈತ್ರಿ ಸರ್ಕಾರಕ್ಕೆ ಮತ್ತೊಮ್ಮೆ ಕಂಟಕ ಎದುರಾಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.
ಈ ಕುರಿತು ಮಾತನಾಡಿರುವ ಡಾ. ಸುಧಾಕರ್ ಆ್ಯಕ್ಷನ್ ಇದ್ದ ಮೇಲೆ ರಿಯಾಕ್ಷನ್ ಇರಲೇಬೇಕು. ಇವತ್ತಿನ ಸಂಪುಟ ವಿಸ್ತರಣೆ ಒಂದು ಆ್ಯಕ್ಷನ್, ಅದರ ಬಳಿಕ ರಿಯಾಕ್ಷನ್ ಆಗುತ್ತೆ ಎಂದು ತಾವು ಮತ್ತೊಮ್ಮೆ ರೆಬೆಲ್ ಆಗಿ ಮೈತ್ರಿ ಸರ್ಕಾರವನ್ನು ಕಾಡುವ ಕುರಿತು ಸೂಚನೆ ನೀಡಿದ್ದಾರೆ.
ಇಂದು ನಡೆಯಲಿರುವ ಸಂಪುಟ ವಿಸ್ತರಣೆಯಲ್ಲಿ ಡಾ. ಸುಧಾಕರ್ ಅವರಿಗೆ ಸಚಿವ ಸ್ಥಾನ ನೀಡದಿದ್ದಲ್ಲಿ ಅವರು ಕಾಂಗ್ರೆಸ್ ಪಕ್ಷ ತ್ಯಜಿಸುವುದು ಬಹುತೇಖ ಖಚಿತ ಎನ್ನಲಾಗುತ್ತಿದೆ. ಇದು ಸಾಮಾನ್ಯವಾಗಿ ಉಭಯ ಪಕ್ಷಗಳ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.
ಶಾಸಕ ಡಾ. ಸುಧಾಕರ್ ಸಚಿವ ಸ್ಥಾನದ ಆಕಾಂಕ್ಷೆಯಾಗಿದ್ದರು. ಆದರೆ, ಅವರಿಗೆ ಸಚಿವ ಸ್ಥಾನ ನೀಡದಿದ್ದ ಪಕ್ಷದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಶಿಫಾರಸ್ಸು ಮಾಡಿದ್ದರು. ಆದರೂ, ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವೂ ನೀಡಿರಲಿಲ್ಲ. ಹೀಗಾಗಿ ಕಳೆದ ಹಲವು ದಿನಗಳಿಂದ ಅವರು ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ ವಿರುದ್ಧ ಕಿಡಿ ಕಾರುತ್ತಲೇ ಇದ್ದಾರೆ.
ಈ ಕುರಿತು ಮಾತನಾಡಿರುವ ಅವರು, “ಮೈತ್ರಿ ಸರ್ಕಾರದ ಆಡಳಿತದಲ್ಲಿ ನಮ್ಮರಾಷ್ಟ್ರೀಯ ನಾಯಕರ ತೀರ್ಮಾನಕ್ಕೆ ಬೆಲೆ ಇಲ್ಲದಂತಾಗಿದೆ. ಈ ಸರ್ಕಾರ ನಮಗೆ ತೃಪ್ತಿ ನೀಡುವುದಕ್ಕಾಗಿ ಕೆಲಸ ಮಾಡುವ ಅಗತ್ಯವಿಲ್ಲ. ಬದಲಿಗೆ ಜನರಿಗೆ ತೃಪ್ತಿದಾಯಕವಾಗಲಿ. ಆದರೆ, ಇಂದು ಮೈತ್ರಿ ಸರ್ಕಾರದ ಕಾರ್ಯವೈಖರಿ ಜನರಿಗೂ ತೃಪ್ತಿದಾಯಕವಾಗಿ ಉಳಿದಿಲ್ಲ” ಎಂದು ಕಿಡಿಕಾರಿದರು.
ಇದೇ ಸಂದರ್ಭದಲ್ಲಿ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರ ಮಧ್ಯಂತರ ಚುನಾವಣೆ ಹೇಳಿಕೆ ಕುರಿತು ಮಾತನಾಡಿದ ಅವರು, ಸದ್ಯ ಮಧ್ಯಂತರ ಚುನಾವಣೆ ಎದುರಾದ್ರೆ ಕಾಂಗ್ರೆಸ್ ಗೆ ಸಂಕಷ್ಟ ಎದುರಾಗಲಿದೆ, ಲೋಕಸಭಾ ಚುನಾವಣೆ ಫಲಿತಾಂಶ ನೋಡಿದ ಮೇಲೆ ಮತ್ತೆ ಚುನಾವಣೆ ಎದುರಿಸುವುದು ಕಷ್ಟ” ಎಂದು ತಿಳಿಸಿದ್ದಾರೆ. ಅಲ್ಲದೆ ಸಮಾಜದಲ್ಲಿ ಶಿಕ್ಷಣ ಮತ್ತು ಆರೋಗ್ಯ ಎರಡು ಕಣ್ಣುಗಳು ಇದ್ದ ಹಾಗೆ ಹಾಗಾಗಿ ಕಳೆದ ಸರ್ಕಾರದಲ್ಲಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಉಚಿತವಾಗಿ ಕೊಡಲಾಗುತ್ತಿತ್ತು. ಈಗ ಪಾಸ್ ನ ದರ ಏರಿಕೆ ಮಾಡಿದ್ದಾರೆ. ಹೀಗಾಗಿ ಈ ಕೂಡಲೇ ಬಸ್ ಪಾಸ್ ದರ ಏರಿಕೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.