ಕ್ರಿಕೆಟ್ ಜಗತ್ತಿನ ಅತೀ ದೊಡ್ಡ ಟೂರ್ನಿ ವಿಶ್ವಕಪ್. ಆದರೆ ಈ ಭಾರಿಯ ವಿಶ್ವಕಪ್ ಟೂರ್ನಿ ಮಳೆಯಿಂದಾಗಿ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ಈಗಾಗಲೇ 3 ಪಂದ್ಯಗಳು ಮಳೆಗೆ ಆಹುತಿಯಾಗಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ರದ್ದಾದ ಬೆನ್ನಲ್ಲೇ ಇದೀಗ ಟೀಂ ಇಂಡಿಯಾ ಅಭಿಮಾನಿಗಳ ಚಿತ್ತ ಇಂಡೋ-ಪಾಕ್ ಪಂದ್ಯದತ್ತ ನೆಟ್ಟಿದೆ.
ಜೂ.16ರಂದು ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ಬದ್ಧವೈರಿಗಳ ಕದನಕ್ಕಾಗಿ ಇಡೀ ವಿಶ್ವವೇ ಕಾದುಕುಳಿತಿದೆ. ಆದರೆ ಮ್ಯಾಂಚೆಸ್ಟ್ರ್ನಲ್ಲಿ ಆಯೋಜಿಸಲಾಗಿರುವ ಈ ಪಂದ್ಯಕ್ಕೂ ಮಳೆ ಭೀತಿ ಕಾಡುತ್ತಿದೆ. ಹವಾಮಾನ ವರದಿ ಪ್ರಕಾರ, ಜೂನ್ 16 ರಂದು ಮ್ಯಾಂಚೆಸ್ಟರ್ನಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಪಂದ್ಯ ರದ್ದಾಗೋ ಸಾಧ್ಯತೆ ಕಡಿಮೆ. ಹೀಗಾಗಿ ಪಂದ್ಯದ ಓವರ್ ಕಡಿತ ಸಂಭವ ಹೆಚ್ಚಿದೆ ಎಂದು ಹವಾಮಾನ ವರದಿ ಹೇಳುತ್ತಿದೆ.
ಈಗಾಗಲೇ ಒಂದು ಪಂದ್ಯ ರದ್ದಾಗಿರೋ ಕಾರಣ ಟೀಂ ಇಂಡಿಯಾ ನಿರಾಸೆ ಅನುಭವಿಸಿದೆ. ಇದೀಗ ಇಂಡೋ-ಪಾಕ್ ಪಂದ್ಯಕ್ಕೂ ಮಳೆ ಅಡ್ಡಿಯಾದರೆ ಅಭಿಮಾನಿಗಳಿಗೆ ಮಾತ್ರವಲ್ಲ, ಐಸಿಸಿ, ಪಂದ್ಯ ಪ್ರಸಾರ ಮಾಡೋ ವಾಹಿನಿ ಸೇರಿದಂತೆ ಎಲ್ಲರಿಗೂ ನಷ್ಟವಾಗಲಿದೆ