ಗ್ರಾಮವಾಸ್ತವ್ಯದ ವೇಳೆ ಸಿಎಂ ಎಚ್​ಡಿ ಕುಮಾರಸ್ವಾಮಿ ವಾಸ್ತವ್ಯ ಹೇಗಿರಲಿದೆ ಗೊತ್ತಾ?

ಬೆಂಗಳೂರು: ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಅವರು ಇದೇ ತಿಂಗಳು 21ರಿಂದ ಗ್ರಾಮವಾಸ್ತವ್ಯ ನಡೆಸುತ್ತಿದ್ದಾರೆ. ಇದಕ್ಕೆ ಸಾಕಷ್ಟು ಪರ-ವಿರೋಧಗಳೂ ಕೇಳಿ ಬಂದಿವೆ. ಇನ್ನು, ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ಕುಮಾರಸ್ವಾಮಿ ವಾಸ್ತವ್ಯ ಹೇಗಿರಲಿದೆ ಎನ್ನುವ ಪ್ರಶ್ನೆಯೂ ಮೂಡಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಎಚ್​ಡಿಕೆ ಅಧಿಕಾರಿಗಳಿಗೆ ಕಿವಿಮಾತು ಹೇಳಿದ್ದು, “ನನ್ನ ವಾಸ್ತವ್ಯಕ್ಕೆ ಪ್ರಾಮುಖ್ಯತೆ ನೀಡಬೇಕಿಲ್ಲ, ಸರಳ ಸಿದ್ಧತೆಗಳಾದರೆ ಸಾಕು,” ಎಂದಿದ್ದಾರೆ.

ಗ್ರಾಮವಾಸ್ತವ್ಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, “ಸರ್ಕಾರ ಮತ್ತು ಜನರ ನಡುವೆ ನಿಕಟ ಸಂಪರ್ಕ ಸಾಧಿಸುವುದು ಗ್ರಾಮವಾಸ್ತವ್ಯದ ಉದ್ದೇಶವೇ ಹೊರತು ಜನಪ್ರಿಯತೆ ಪಡೆಯುವುದಲ್ಲ. ಸ್ಥಳೀಯರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲು ಇದು ಸಹಕಾರಿ,” ಎಂದು ಗ್ರಾಮವಾಸ್ತವ್ಯದ ಉದ್ದೇಶ ಹೇಳಿಕೊಂಡರು.

“ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ನನ್ನಗುರಿ. ರಸ್ತೆ, ಕುಡಿಯುವ ನೀರು, ಶಾಲಾ ಕಾಲೇಜುಗಳ ಸುಧಾರಣೆ ಮಾಡುವುದು ನನ್ನ ಆದ್ಯತೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಿಕೊಡುವುದು ನನ್ನ ಧ್ಯೇಯ,” ಎಂದರು ಕುಮಾರಸ್ವಾಮಿ.

ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯದಿಂದ ಸ್ಥಳೀಯ ಸಮಸ್ಯೆಗಳ ಪರಿಹಾರವಷ್ಟೇ ಅಲ್ಲದೆ ಆಯಾ ಜಿಲ್ಲೆಗಳ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಇದೊಂದು ಅತ್ಯುತ್ತಮ ಬೆಳವಣಿಗೆ ಎನ್ನುವ ಅಭಿಪ್ರಾಯ ಸಚಿವರದ್ದು.

ಜೂನ್​ 21ರಂದು ಯಾದಗಿರಿ ಜಿಲ್ಲೆಯ ಗುರುಮಿಟ್‍ಕಲ್ ತಾಲೂಕಿನ ಚಂದರಕಿ ಗ್ರಾಮ, ಜೂನ್​ 22 ಅಫ್ಜಲ್‍ಪುರ ತಾಲ್ಲೂಕಿನ ಹೆರೂರು-ಬಿ ಗ್ರಾಮ ಮತ್ತು ಜೂನ್​ 26ರಂದು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕರಿಗುಡ್ಡ ಗ್ರಾಮದಲ್ಲಿ, ಜೂನ್​ 27ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಉಜಳಂಬ ಗ್ರಾಮಗಳಲ್ಲಿ ಎಚ್​ಡಿಕೆ ಗ್ರಾಮವಾಸ್ತವ್ಯ ನಡೆಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ