ಬೆಂಗಳೂರು,ಜೂ.13- ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ಎಸ್ಐಟಿ ಈಗಾಗಲೇ ಆರಂಭಿಸಿದೆ.
ಐಎಂಎ ವಿರುದ್ಧ ದೂರು ದಾಖಲಾಗಿರುವ ಕಮರ್ಷಿಯಲ್ಸ್ಟ್ರೀಟ್ ಠಾಣೆಯ ಇನ್ಸ್ಪೆಕ್ಟರ್, ಎಸಿಪಿ, ಡಿಸಿಪಿ ಅವರುಗಳಿಂದ ಪ್ರಕರಣ ತನಿಖಾ ತಂಡದ ನೇತೃತ್ವ ವಹಿಸಿರುವ ಡಿಐಜಿ ರವಿಕಾಂತೇಗೌಡ ಅವರು, ನಿನ್ನೆ ರಾತ್ರಿಯೇ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಇಂದು ಬೆಳಗ್ಗೆ ಕೆಎಸ್ಆರ್ಪಿಯ ಸಂಶೋಧನಾ ಸಂಸ್ಥೆಯಲ್ಲಿ ರವಿಕಾಂತೇಗೌಡರ ನೇತೃತ್ವದಲ್ಲಿ ಎಸ್ಐಟಿಯ ಮೊದಲ ಸಭೆ ನಡೆಯಿತು. ತನಿಖೆಯನ್ನು ಯಾವ ಯಾವ ದೃಷ್ಟಿಕೋನದಲ್ಲಿ ಮಾಡಬೇಕು, ಯಾವ ಅಧಿಕಾರಿ ಯಾವ ಕೆಲಸ ಮಾಡಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.
ಐಎಂಎ ಕಂಪನಿಯ ಮಾಲೀಕ ಮನ್ಸೂರ್ ಖಾನ್ ಎಲ್ಲಿಗೆ ಹೋಗಿದ್ದಾರೆ, ಯಾವಾಗ ಹೋಗಿರಬಹುದು, ಅವರ ಕುಟುಂಬ ಎಲ್ಲಿದೆ, ಅವರುಗಳನ್ನು ಪತ್ತೆ ಮಾಡಲು ಯಾವ ಮಾರ್ಗ ಅನುಸರಿಸಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಸುಧೀರ್ಘವಾಗಿ ಎಸ್ಐಟಿ ಅಧಿಕಾರಿಗಳು ಸಭೆಯಲ್ಲಿ ಸಮಾಲೋಚಿಸಿದ್ದಾರೆ.
ಎಸ್ಐಟಿಯಲ್ಲಿ ಈಗ 11ಕ್ಕೂ ಹೆಚ್ಚು ವಿವಿಧ ದರ್ಜೆಯ ಅಧಿಕಾರಿಗಳು ಇದ್ದಾರೆ. ನಂತರ ಅಧಿಕಾರಿ ಮತ್ತು ಸಿಬ್ಬಂದಿಗಳ ಸಂಖ್ಯೆ ಹೆಚ್ಚಾಗಬಹುದು.