ಆನ್‍ಲೈನ್ ವ್ಯವಸ್ಥೆಯಿಂದ ಭ್ರಷ್ಟಚಾರಕ್ಕೆ ಕಡಿವಾಣ ಬೀಳಲಿದೆ-ಸಿಎಂ ಕುಮಾರಸ್ವಾಮಿ

ಬೆಂಗಳೂರು,ಜೂ.13- ಕಟ್ಟಡ ನಕ್ಷೆ ಮತ್ತು ಭೂಮಿ ಪರಿವರ್ತನೆ ಕುರಿತ ಪರವಾನಗಿ ಪಡೆಯಲು ದೇಶದಲ್ಲೇ ಪ್ರಪ್ರಥಮ ಬಾರಿಗೆ ಆನ್‍ಲೈನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ವಿಧಾನಸೌಧದ ಬಾಂಕ್ವೆಟ್ ಹಾಲ್‍ನಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಪೌರಾಡಳಿತ ಯೋಜನಾ ನಿರ್ದೇಶಾನಲಯದ ವತಿಯಿಂದ ರೂಪಿಸಲಾದ ತಂತ್ರಾಂಶ ಮತ್ತು ವೆಬ್‍ಸೈಟ್‍ನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ದೇಶದಲ್ಲಿ ಪ್ರಥಮ ಬಾರಿಗೆ ಜನಸ್ನೇಹಿಯಾದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಹಿಂದೆ ಭೂಮಿ ವಿವರಗಳನ್ನು ಪಡೆಯಲು ನಕ್ಷೆ ಅನುಮೋದನೆಗಾಗಿ ಹಲವಾರು ಅಧಿಕಾರಿಗಳ ಬಳಿ ಅಲೆಯಬೇಕಾಗಿತ್ತು.ಈ ಹೊಸ ಪದ್ದತಿಯಿಂದ ಮನೆಯಲ್ಲೆ ಕುಳಿತು ಕಂಪ್ಯೂಟರ್ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು.ಇದರಿಂದ ಅಧಿಕಾರಿಗಳನ್ನು ಭೇಟಿ ಮಾಡುವ ಅಗತ್ಯವಿರುವುದಿಲ್ಲ ಎಂದರು.

ಪಾಲಿಕೆಗಳಿಗೆ ಮೂಲಸೌಲಭ್ಯ ಕಲ್ಪಿಸಲು 150 ಕೋಟಿ ರೂ.ಒದಗಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬಹಳ ದಿನಗಳಿಂದ ನೆನೆಗುದ್ದಿಗೆ ಬಿದ್ದಿರುವ ಔಟರ್ ಪೆರಿಪೆರಲ್ ರಿಂಗ್ ರೋಡ್ ಕಾಮಗಾರಿಗೆ ಚಾಲನೆ ನೀಡಲಾಗುವುದು, ಸಬರ್ಬನ್ ರೈಲು ಯೋಜನೆಗೆ ರಾಜ್ಯ ಸರ್ಕಾರದಿಂದ ಅಗತ್ಯವಾದ ಎಲ್ಲ ಅನುಮತಿಯನ್ನು ನೀಡಲಾಗಿದೆ. ಕಾಮಗಾರಿಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಲು ಕೇಂದ್ರ ರೈಲ್ವೆ ಸಚಿವರನ್ನು ಮತ್ತೊಮ್ಮೆ ಭೇಟಿಯಾಗಿ ಒತ್ತಡ ಹೇರಲಾಗುವುದು ಎಂದು ತಿಳಿಸಿದರು.

ರೈತರ ಸಾಲಮನ್ನ ವಿಷಯದಲ್ಲಿ ರಾಜ್ಯ ಸರ್ಕಾರ ಬದ್ದತೆಯಿಂದ ನಡೆದುಕೊಂಡಿದೆ. ಹಣ ದುರುಪಯೋಗವಾಗಬಾರದೆಂಬ ಕಾರಣಕ್ಕಾಗಿ ನೇರವಾಗಿ ರೈತರ ಖಾತೆಗೆ ಹಣ ಒದಗಿಸಲಾಗುತ್ತಿದೆ. ಬ್ಯಾಂಕ್‍ಗಳು ಮಾಡಿದ ಲೋಪಕ್ಕೆ ಮಾಧ್ಯಮಗಳು ಸರ್ಕಾರವನ್ನು ಟೀಕಿಸುತ್ತಿವೆ. ಸರ್ಕಾರದ ಒಳ್ಳೆಯ ಕೆಲಸಗಳನ್ನು ಪ್ರಚಾರ ಮಾಡುವ ಹೃದಯ ವೈಶಾಲ್ಯತೆಯನ್ನು ಮಾಧ್ಯಮಗಳು ಬೆಳೆಸಿಕೊಳ್ಳಬೇಕು ಎಂದರು.

ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಮಾತನಾಡಿ, ಕಟ್ಟಡ ನಿರ್ಮಾಣದ ನಕ್ಷೆಗೆ ಅನುಮೋದನೆ ಪಡೆಯಲು ಈ ಮೊದಲು 14 ಇಲಾಖೆಗಳಿಗೆ ಅರ್ಜಿ ಸಲ್ಲಿಸಿ ಅಲೆಯಬೇಕಿತ್ತು. ಅದನ್ನು ತಪ್ಪಿಸಲು ಆನ್‍ಲೈನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. 14 ಪರಾವನಗಿಗಳ ಅರ್ಜಿಗಳನ್ನು ಒಮ್ಮೆಲೆ ಪಡೆದು ಕಂಪ್ಯೂಟರ್ ಮೂಲಕ ಆಯಾ ಇಲಾಖೆಗಳಿಗೆ ರವಾನಿಸಲಾಗುತ್ತದೆ.

ನಿಗದಿತ ಅವಧಿಯಲ್ಲಿ ಪರಾವನಗಿ ಸಿಗದಿದ್ದರೆ ಅದನ್ನು ಡೀಮ್ಡ್ ಲೈಸೆನ್ಸ್ ಎಂದು ಪರಿಗಣಿಸಲಾಗುತ್ತದೆ.ಸ್ಥಳ ಪರಿಶೀಲನೆಗೂ ಆನ್‍ಲೈನ್‍ನಲ್ಲೇ ದಿನಾಂಕ ನಿಗದಿಪಡಿಸಲಾಗುವುದು.ನಿಗದಿತ ದಿನದ ಮಾಹಿತಿಯನ್ನು ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಹಾಗೂ ಅರ್ಜಿದಾರರಿಗೆ ಎಸ್‍ಎಂಎಸ್ ಮೂಲಕ ತಿಳಿಸಲಾಗುವುದು.ಅಂದು ಎಲ್ಲರೂ ಖುದ್ದು ಹಾಜರಿದ್ದು, ಸ್ಥಳ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.

30*40 ಅಳತೆಯ ಮಧ್ಯಮ ವರ್ಗದ ಮನೆಯವರಿಗೆ ಸ್ವಯಂಘೋಷಿತ ಪರಾವನಗಿ ಪದ್ದತಿಯನ್ನು ಜಾರಿಗೆ ತರಲಾಗುತ್ತದೆ. ಭೂಮಿ ಬದಲಾವಣೆ, ಕಟ್ಟಡ ನಕ್ಷೆ ಅನುಮೋದನೆ, ಬಡಾವಣೆ ಅನುಮೋದನೆಗೆ ಆನ್‍ಲೈನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದರಿಂದ ನಾಗರಿಕರಿಗೂ ಅನುಕೂಲವಾಗಲಿದೆ.ಸರ್ಕಾರದ ಅದಾಯವೂ ಹೆಚ್ಚಲಿದೆ ಎಂದರು.

ನಕ್ಷೆ ಅನುಮೋದನೆಗಾಗಿ ಏಕಗವಾಕ್ಷಿ ಯೋಜನೆಗಳನ್ನು ರೂಪಿಸಲಾಗಿದೆ.ಆನ್‍ಲೈನ್ ಮೂಲಕ ಅನುಮೋದನೆ ದೊರೆಯುವುದರಿಂದ ಲೋಪಗಳು ಕಡಿಮೆಯಾಗಿ ಮಾದರಿ ನಗರಗಳ ನಿರ್ಮಾಣವಾಗಲಿದೆ.ಈ ಮೊದಲು ಎಲ್ಲ ದಾಖಲಾತಿಗಳು ಸರಿಯಿದ್ದವರಿಗೆ ವಿಳಂಬವಾಗುತ್ತಿತ್ತು.

ದಾಖಲೆಗಳು ಸರಿ ಇಲ್ಲದವರ ಕೆಲಸಗಳು ಬೇಗ ಬೇಗ ನಡೆಯುತ್ತಿದ್ದವು.ಈಗ ಜನರಲ್ಲಿ ತಪ್ಪು ಮಾಡಿದರೆ ಸರಿ ಎಂಬ ಭಾವನೆ ಬರುತ್ತಿತ್ತು.ಆನ್‍ಲೈನ್ ಪದ್ಧತಿಯಿಂದ ವ್ಯವಸ್ಥೆ ಸುಧಾರಣೆಯಾಗಲಿದೆ.

ಸೌರಶಕ್ತಿ ವಿದ್ಯುತ್‍ಗೆ ಹೆಚ್ಚಿನ ಬೆಂಬಲ ನೀಡುವುದು, ಜಿಪಿಎಸ್ ಆಧಾರದ ಮೇಲೆ ಸಿಡಿಪಿ ತಯಾರಿಸುವುದು ನಮ್ಮ ಸರ್ಕಾರದ ಆದ್ಯತೆ ಎಂದರು.

ಪೇಯಿಂಗ್ ಗೆಸ್ಟ್‍ಗಳಿಗಾಗಿ ಹೊಸ ರೀತಿಯ ನಿಯಮಾವಳಿಗಳನ್ನು ರೂಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.ಶೀಘ್ರವೇ ಇದಕ್ಕಾಗಿ ಹೊಸ ನೀತಿ ಜಾರಿಗೆ ಬರಲಿದೆ.

ಅಂಗೀಕೃತ ವಾಸ್ತುಶಿಲ್ಪಿಗಳೇ ಕಟ್ಟಡ ನಿರ್ಮಾಣ ಕೆಲಸ ಮಾಡಬೇಕೆಂಬ ನಿಯಮಾವಳಿಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.

ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಜೈನ್ ಮಾತನಾಡಿ, ಆಸ್ತಿ ತೆರಿಗೆ ಪಾವತಿ, ಖಾತೆ ಬದಲಾವಣೆ ಸೇವೆಗಳು ಆನ್‍ಲೈನ್‍ನಲ್ಲಿ ಲಭ್ಯವಿದ್ದು, ಇನ್ನು ಮುಂದೆ ಭೂಮಿ ಬದಲಾವಣೆ ಅನುಮೋದನೆ, ಕಟ್ಟಡ ನಕ್ಷೆ ಅನುಮೋದನೆ, ಬಡಾವಣೆ ಅನುಮೋದನೆ ಸೇವೆಗಳನ್ನು ಆನ್‍ಲೈನ್‍ಲ್ಲೇ ಒದಗಿಸಲು ನಿರ್ಧರಿಸಲಾಗಿದೆ.

ಮೇಯರ್ ಗಂಗಾಂಬಿಕೆ, ಬಿಡಿಎ ಆಯುಕ್ತ ರಾಕೇಶ್ ಸಿಂಗ್, ಪೌರಾಡಳಿತ ಇಲಾಖೆಯ ಶೇಖರಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.

ಇದೇ ವೇಳೆ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಕೇಂದ್ರ ಕಚೇರಿ, ನಗರ ಯೋಜನಾ ಮಂಡಳಿ, 30 ಶಾಖಾ ಕಚೇರಿಗಳು, ಒಂದು ವಲಯ ಕಚೇರಿ, 3 ವಿಭಾಗೀಯ ಕಚೇರಿ, 30 ನಗರಾಭಿವೃದ್ಧಿ ಪ್ರಾಧಿಕಾರಗಳು, 52 ಯೋಜನಾ ಪ್ರಾಧಿಕಾರಗಳು ಒಟ್ಟು 118 ಪ್ರಾಧಿಕಾರಗಳ ವೆಬ್‍ಸೈಟ್‍ಗಳನ್ನು ಮುಖ್ಯಮಂತ್ರಿ ಲೋಕಾರ್ಪಣೆ ಮಾಡಿದರು.

ಕಟ್ಟಡ ನಕ್ಷೆಯನ್ನುಆನ್‍ಲೈನ್‍ನಲ್ಲೆ ಅನುಮೋದನೆ ಪಡೆದುಕೊಂಡ ಫಲಾನುಭವಿಗಳಿಗೆ ಅನುಮೋದನಾ ಪತ್ರವನ್ನು ವಿತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ