ಬೆಂಗಳೂರು, ಜೂ. 13- ಮುಗ್ಧ ಗ್ರಾಹಕರಿಗೆ ಸಾವಿರಾರು ಕೋಟಿ ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಐಎಂಎ ಸಂಸ್ಥೆ ಮಾಲೀಕ ಮಹಮ್ಮದ್ ಮನ್ಸೂರ್ ಖಾನ್ ನಗರದಲ್ಲೇ 500ಕೋಟಿಗೂ ಹೆಚ್ಚು ಮೌಲ್ಯದ 13ಕಟ್ಟಡಗಳನ್ನು ಹೊಂದಿರುವುದು ಇದೀಗ ಬಹಿರಂಗಗೊಂಡಿದೆ.
ಈ 13 ಕಟ್ಟಡಗಳು ಮಹಮ್ಮದ್ ಮನ್ಸೂರ್ ಖಾನ್ ಸ್ವಂತ ಹೆಸರಿನಲ್ಲಿರುವ ಆಸ್ತಿಗಳು.ಇನ್ನು ಅದೆಷ್ಟು ಕೋಟಿ ಬೇನಾಮಿ ಆಸ್ತಿ ಹೊಂದಿರಬಹುದು ಎಂಬುದನ್ನು ಆ ದೇವರು ಬಲ್ಲ.
ಹಗರಣ ಬಯಲಿಗೆ ಬರುತ್ತಿದ್ದಂತೆ ಬಿಬಿಎಂಪಿ ಪ್ರಸಕ್ತ ಸಾಲಿನ ತೆರಿಗೆ ದಾಖಲೆ ಪರಿಶೀಲಿಸಿದಾಗ ಆತ 500ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವುದು ತಿಳಿದು ಬಂದಿದೆ.
ಎಲ್ಲಲ್ಲಿ ಆಸ್ತಿ:
ಈಸ್ಟ್ ಎಂಡ್ ಮೇನ್ ರೋಡ್ನಲ್ಲಿರುವ ಆಸ್ತಿಗೆ ಆತ 37,566ರೂ ತೆರಿಗೆ ಕಟ್ಟಿದ್ದಾನೆ. ಪಾರ್ಕ್ ರೋಡ್ನಲ್ಲಿರುವ ಆಸ್ತಿಗೂ 61,221ರೂ ತೆರಿಗೆ ಕಟ್ಟಿದ್ದಾನೆ.
ಬೆನ್ಸನ್ ಕ್ರಾಸ್ನಲ್ಲಿರುವ ಆಸ್ತಿಗೆ 3,607ರೂ ತೆರಿಗೆ, ಅಲೆಕ್ಸಾಂಡರ್ ಸ್ಟ್ರೀಟ್ನಲ್ಲಿರುವ ಆಸ್ತಿಗೆ 7,603ರೂ, ಬನ್ನೆರುಘಟ್ಟ ರಸ್ತೆಯಲ್ಲಿರುವ ಆಸ್ತಿಗೆ 57,584ರೂ, ಸೆಂಟ್ಜಾನ್ ಚರ್ಚ್ ಸ್ಟ್ರೀಟ್ನಲ್ಲಿರುವ ಆಸ್ತಿಗೆ 61,615ರೂ, ಜಯನಗರ 7ನೇ ಬ್ಲಾಕ್ನಲ್ಲಿರುವ ಆಸ್ತಿಗೆ 52,330ರೂ, ಸರ್ಪಂಟೈನ್ ಸ್ಟ್ರೀಟ್ನಲ್ಲಿರುವ 17,766 ರೂ, ಪಾಟರಿ ಟೌನ್ನಲ್ಲಿರುವ ಆಸ್ತಿಗೆ 45,164ರೂ, ಶಿವಾಜಿನಗರ ಲೇಡಿ ಕರ್ಜನ್ ರಸ್ತೆಯಲ್ಲಿರುವ ಆಸ್ತಿಗೆ 4,02,331ರೂ. ತೆರಿಗೆ ಕಟ್ಟಿದ್ದು, ಇದೇ ರಸ್ತೆಯಲ್ಲಿರುವ ಮತ್ತೊಂದು ಆಸ್ತಿಗೆ ಇನ್ನೊಂದು ಆಸ್ತಿಗೆ 1,580ರೂ, ಜಯನಗರ 4ನೇ ಬ್ಲಾಕ್ನಲ್ಲಿರುವ ಆಸ್ತಿಗೆ 55,563ರೂ ಹಾಗೂ ಎಚ್ಬಿಆರ್ ಬಡಾವಣೆಯಲ್ಲಿ 1,428ರೂ.ಗಳ ತೆರಿಗೆಯನ್ನು ಪ್ರಸಕ್ತ ಸಾಲಿನಲ್ಲಿ ಮನ್ಸೂರು ತೆರಿಗೆಯನ್ನು ಪಾವತಿಸಿದ್ದಾರೆ.
ಈತ ನಗರದಲ್ಲಿರುವ ಈ 13 ಆಸ್ತಿಗಳಿಗೆ ಒಟ್ಟಾರೆ 8,05,457ರೂ. ತೆರಿಗೆ ಪಾವತಿಸಿರುವುದು ದಾಖಲೆಯಲ್ಲಿ ಗೊತ್ತಾಗಿದೆ.
ಮನ್ಸೂರನ ಬಹುತೇಕ ಆಸ್ತಿಗಳು ಪ್ರತಿಷ್ಠಿತ ಬಡಾವಣೆಗಳಲ್ಲೇ ಇರುವುದು ವಿಶೇಷ. ಈತನ ಆಸ್ತಿಗಳ ಮಾರುಕಟ್ಟೆ ಬೆಲೆ 500ಕೋಟಿಗೂ ಹೆಚ್ಚು ಎಂಬುದು ಬಹಿರಂಗಗೊಂಡಿದೆ. ಇನ್ನೂ ಯಾರ್ಯಾರ ಹೆಸರಿನಲ್ಲಿ ಎಷ್ಟೇಷ್ಟು ಇದೆಯೋ ಅದೆಲ್ಲ ಸೇರಿದರೆ ಸಾವಿರಾರು ಕೋಟಿ ಆಗುವುದು ಎಂದು ಅಂದಾಜಿಸಲಾಗಿದೆ.