ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಚಿವ ಸಂಪುಟ ಶುಕ್ರವಾರ ವಿಸ್ತರಣೆಯಾಗಲಿದ್ದು, ಅನಿರೀಕ್ಷಿತ ಬೆಳವಣಿಗೆಯಲ್ಲಿ ಜೆಡಿಎಸ್ ಹಿರಿಯ ನಾಯಕ, ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮಂತ್ರಿಮಂಡಲಕ್ಕೆ ಸೇರ್ಪಡೆಯಾಗುವ ಲಕ್ಷಣಗಳು ಕಾಣತೊಡಗಿವೆ.
ಶುಕ್ರವಾರ ಮಧ್ಯಾಹ್ನ 11.30 ಕ್ಕೆ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಕ್ಷೇತರ ಶಾಸಕರಿಬ್ಬರು ಮಂತ್ರಿಗಳಾಗುವುದು ನಿಶ್ಚಿತವಾಗಿದೆಯಾದರೂ ಕೊನೆಯ ಕ್ಷಣದಲ್ಲಿ ಜೆಡಿಎಸ್ ವತಿಯಿಂದ ವಿಶ್ವನಾಥ್ ಅವರು ಮಂತ್ರಿಯಾಗುವ ಸಾಧ್ಯತೆಗಳಿವೆ.
ಜೆಡಿಎಸ್ ಕೋಟಾದಲ್ಲಿ ಎರಡು ಮಂತ್ರಿ ಸ್ಥಾನಗಳು ಖಾಲಿ ಉಳಿದಿದ್ದು, ಈ ಪೈಕಿ ಒಂದನ್ನು ಕಾಂಗ್ರೆಸ್ ಪಕ್ಷೇತರ ಶಾಸಕರಿಗೆ ಬಿಟ್ಟು ಕೊಡಲು ನಿರ್ಧರಿಸಿದೆ. ಕಾಂಗ್ರೆಸ್ ಕೋಟಾದಲ್ಲಿ ಕೇವಲ ಒಂದು ಸ್ಥಾನ ಮಾತ್ರ ಬಾಕಿ ಇದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ – ಜೆಡಿಎಸ್ ಕೋಟಾದ ಎರಡು ಸ್ಥಾನಗಳ ಪೈಕಿ ಒಂದನ್ನು ಕೇಳಿ ಪಡೆದಿದೆ.
ಜೆಡಿಎಸ್ ವತಿಯಿಂದ ಖಾಲಿ ಉಳಿದಿರುವ ಎರಡು ಮಂತ್ರಿ ಸ್ಥಾನಗಳನ್ನು ತನಗೇ ಬಿಟ್ಟುಕೊಡುವಂತೆ ಕಾಂಗ್ರೆಸ್ ಕೇಳಿತಾದರೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಇದಕ್ಕೊಪ್ಪಿರಲಿಲ್ಲ.
ಈ ಹಿನ್ನೆಲೆಯಲ್ಲಿ ಜೆಡಿಎಸ್ ಬಿಟ್ಟು ಕೊಟ್ಟ ಒಂದು ಸ್ಥಾನವನ್ನು ಭರ್ತಿ ಮಾಡಲು ನಿರ್ಧರಿಸಿರುವ ಕಾಂಗ್ರೆಸ್ ಪಕ್ಷ, ತನ್ನ ಕೋಟಾವನ್ನು ಭರ್ತಿ ಮಾಡದೆ ಹಾಗೇ ಖಾಲಿ ಇರಿಸಿಕೊಳ್ಳಲು ನಿರ್ಧರಿಸಿದೆ.
ಆದರೆ ಈ ಒಂದು ಸ್ಥಾನವನ್ನು ರಾಮಲಿಂಗಾರೆಡ್ಡಿ ಅವರಿಗೆ ನೀಡಬೇಕು ಎಂಬ ಒತ್ತಡ ಹೆಚ್ಚಿದೆಯಾದರೂ ಈ ಸ್ಥಾನವನ್ನು ಭರ್ತಿ ಮಾಡಿದರೆ ಬಿ.ಸಿ ಪಾಟೀಲ್ , ಎಚ್.ಕೆ.ಪಾಟೀಲ್ ಸೇರಿದಂತೆ ಉಳಿದ ಹಿರಿಯ ಕಾಂಗ್ರೆಸ್ ನಾಯಕರು ಬಂಡಾಯ ಏಳಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರ.
ಈ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಲಿರುವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಪಕ್ಷೇತರ ಶಾಸಕರಿಬ್ಬರು ಮಂತ್ರಿಗಳಾಗುವ ಸಾಧ್ಯತೆ ನಿಚ್ಚಳವಾಗಿದೆ. ಆದರೆ ಆರ್ ಶಂಕರ್ ಕೆಪಿಜೆಪಿ ಪಕ್ಷವನ್ನುಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳಿಸುವ ಮಾತನ್ನು ಇನ್ನೂ ಪೂರ್ಣಗೊಳಿಸಿಲ್ಲ. ಹೀಗಾಗಿ ತಡಮಾಡಿದರೆ ನಾಳೆ ನಡೆಯುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಪಡೆಯಲು ಕಷ್ಟವಾಗಬಹುದು ಎಂಬ ಮಾತು ಕೇಳಿ ಬರುತ್ತಿವೆ.