ಹಿಗ್ಗಿದ ಸಂಪುಟ: ಇಂದು ಸಂಜೆ 5.20 ಕ್ಕೆ ಎಂ.ಬಿ ಪಾಟೀಲ್ ಸೇರಿದಂತೆ 8 ಸಚಿವರ ಪ್ರಮಾಣ ವಚನ

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ನೀಡಿದ್ದ ಭರವಸೆಯಂತೆಯೇ ಡಿಸೆಂಬರ್ 22 ರಂದು ಅಂದರೇ ಇಂದು ಸಂಪುಟ ವಿಸ್ತರಣೆಯಾಗಲಿದೆ, ಇಬ್ಬರು ಹಾಲಿ ಸಚಿವರಿಗೆ ಕೊಕ್ ನೀಡಿದ್ದು, 8 ಮಂದಿ ನೂತನ ಸಚಿವರಾಗಿ ಇಂದು ಸಂಜೆ  5.20 ಕ್ಕೆ ರಾಜಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ  ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಸಚಿವ ಸಂಪುಟ ಪುನಾರಚನೆಯಲ್ಲಿ ಉತ್ತರ ಕರ್ನಾಟಕದ ರಮೇಶ್ ಜಾರಕಿಹೊಳಿ ಅವರಿಗೆ ಕೊಕ್ ಕೊಡಲು ನಿರ್ಧರಿಸಿದ್ದಾರೆನ್ನಲಾಗಿದೆ. ಅದೇ ರೀತಿ ಅರಣ್ಯ ಸಚಿವ ಆರ್.ಶಂಕರ್ ಅವರನ್ನು ಸಂಪುಟದಿಂದ ಕೈಬಿಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಮೇಶ್ ಜಾರಕಿಹೊಳಿ ಮತ್ತು ಆರ್.ಶಂಕರ್ ಅವರನ್ನು ಕೈಬಿಟ್ಟು ಸತೀಶ್ ಜಾರಕಿಹೊಳಿ, ಎಂಎಲ್ ಸಿ ಆರ್.ಬಿ.ತಿಮ್ಮಾಪುರ್, ಸಿಎಸ್ ಶಿವಳ್ಳಿ, ಎಂಟಿಬಿ ನಾಗರಾಜ್, ಪಿಟಿ ಪರಮೇಶ್ವರ್ ನಾಯ್ಕ್, ಎಂಬಿ ಪಾಟೀಲ್,  ರಹೀಂ ಖಾನ್,  ತುಕಾರಾಂ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇನ್ನೂ ಸಮ್ಮಿಶ್ರ ಸರ್ಕಾರ 8 ಮಂದಿ ಸಂಸದೀಯ ಕಾರ್ಯದರ್ಶಿಗಳ ನೇಮಕಕ್ಕೂ ಮುಂದಾಗಿದೆ. ಮಾಜಿ ಸಿಎಂ ಧರಂ ಸಿಂಗ್ ಪುತ್ರ ಅಜಯ್ ಸಿಂಗ್, ದೆಹಲಿಯಲ್ಲಿ ಸರ್ಕಾರದ ಪ್ರತಿನಿಧಿಯಾಗಿ ಕೆಲಸ ಮಾಡಲಿದ್ದಾರೆ, ವಿ. ಮುನಿಯಪ್ಪ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಜಯಮಾಲಾ ಅವರನ್ನು ಕೈ ಬಿಡುವ ಪ್ರಸ್ತಾವನೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ. ನೇಮಕವಾಗುತ್ತಿರುವ 8 ಮಂದಿ ಸಚಿವರಲ್ಲಿ 5 ಮಂದಿ ಉತ್ತರ ಕರ್ನಾಟಕದವರಾಗಿದ್ದು, ಈ ಬಾರಿ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡಲಾಗಿದೆ, ಎಂಬಿ ಪಾಟೀಲ್ ಮತ್ತು ಬಿ.ಸಿ ಪಾಟೀಲ್ ನಡುವೆ ಮಂತ್ರಿಗಿರಿಗಾಗಿ ತೀವ್ರ ಪೈಪೋಟಿ ಎದ್ದಿತ್ತು, ಆದರೆ ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಎಂಬಿ ಪಾಟೀಲ್ ಪರ ಲಾಬಿ ಮಾಡಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕರಾದ ರೋಷನ್ ಬೇಗ್, ರಾಮಲಿಂಗಾ ರೆಡ್ಡಿ, ಆನಂದ್ ಸಿಂಗ್, ಬಿ.ನಾಗೇಂದ್ರ  ಹಾಗೂ ಡಾ ಸುಧಾಕರ್ ಅವರು ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ,.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ