ಐಎಂಎ ಮಾಲೀಕನ ವಿರುದ್ಧ ರೆಡ್ ಕಾರ್ನರ್ ನೋಟಿಸ್

ಬೆಂಗಳೂರು, ಜೂ.12- ಸಾವಿರಾರು ಜನರಿಗೆ ನೂರಾರು ಕೋಟಿ ವಂಚನೆ ಮಾಡಿ ತಲೆ ಮರೆಸಿಕೊಂಡಿರುವ ಐಎಂಎ ಜುವೆಲ್ಸ್ ಸಂಸ್ಥೆ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲು ಸಿದ್ಧತೆ ನಡೆದಿದೆ.

ಒಂದು ವೇಳೆ ಮೊಹಮ್ಮದ್ ಮನ್ಸೂರ್ ಖಾನ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಯಾದರೆ ದೇಶ ಬಿಟ್ಟು ಹೊರ ಹೋಗಲು ಸಾಧ್ಯವಾಗುವುದಿಲ್ಲ. ವಿಮಾನ ನಿಲ್ದಾಣ, ಬಂದರು ಸೇರಿದಂತೆ ಯಾವುದೇ ಸ್ಥಳದಲ್ಲಿ ಆತನನ್ನು ವಶಕ್ಕೆ ಪಡೆಯಲು ಅವಕಾಶವಿರುತ್ತದೆ.

ವಂಚನೆ ಪ್ರಕರಣಗಳಲ್ಲಿ ಬಹುತೇಕರು ಬಂಧನ ಬೀತಿಯಿಂದ ತಪ್ಪಿಸಿಕೊಳ್ಳಲು ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹೀಗಾಗಿ ಅವರು ಪರಾರಿಯಾಗದಂತೆ ಲುಕ್‍ಔಟ್ ನೋಟಿಸ್ ಜಾರಿ ಮಾಡುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಕಳೆದ ನಾಲ್ಕು ದಿನಗಳಿಂದ ತಲೆಮರೆಸಿಕೊಂಡಿರುವ ಮೊಹಮ್ಮದ್ ಮನ್ಸೂರ್ ಖಾನ್ ತಮ್ಮ ಕುಟುಂಬ ಸಮೇತ ಬೆಂಗಳೂರಿನಲ್ಲಿರುವುದಾಗಿ ಆಡಿಯೋ ಬಿಡುಗಡೆ ಮಾಡಿದ್ದರು. ಆದರೆ ಎಲ್ಲಿದ್ದಾರೆ ಎಂಬುದು ಈವರೆಗೂ ಪತ್ತೆಯಾಗಿಲ್ಲ.

ಕಳೆದ ಒಂದು ವಾರದ ಹಿಂದೆಯೇ ಮನ್ಸೂರ್ ಖಾನ್ ಕುಟುಂಬ ಸಮೇತ ಕೊಲ್ಲಿ ರಾಷ್ಟ್ರಕ್ಕೆ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ಹೂಡಿಕೆಯಲ್ಲಿ ನಷ್ಟವಾದ ಕಾರಣ ಪೊಲೀಸರು ಬಂಧಿಸಬಹುದು ಎಂಬ ಭೀತಿಯಿಂದ ತಪ್ಪಿಸಿಕೊಳ್ಳಲು ಈ ಉಪಾಯ ಕಂಡುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಹೂಡಿಕೆ ಮಾಡಿರುವ ಹಣ ನಷ್ಟವಾಗಿದೆ ಎಂಬುದು ಬಹಿರಂಗಗೊಂಡರೆ ಸಾರ್ವಜನಿಕರು ಹಲ್ಲೆ ನಡೆಸಬಹುದು ಜೊತೆಗೆ ಪೊಲೀಸರು ಕೈಕೋಳ ತೊಡಿಸಬಹುದೆಂಬ ಬೀತಿಯಿಂದಾಗಿಯೇ ಪರಾರಿಯಾಗಿದ್ದಾನೆ.

ಇದೀಗ ಆತನ ವಿರುದ್ದ ರೆಡ್ ಕಾರ್ನರ್ ನೋಟಿಸ್ ಜಾರಿಯಾಗುತ್ತಿರುವುದರಿಂದ ವಿದೇಶದಲ್ಲಿ ತಲೆಮರೆಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಒಂದು ಬಾರಿ ನೋಟಿಸ್ ಜಾರಿ ಆದರೆ ದೇಶದ ಎಲ್ಲ ವಿಮಾನ ನಿಲ್ದಾಣಗಳಿಗೂ ಮಾಹಿತಿ ಹೋಗುತ್ತದೆ.

ಇಂತಹ ವ್ಯಕ್ತಿ ಕಂಡು ಬಂದರೆ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಂಸ್ಥೆ ನೋಟಿಸ್ ಹೊರಡಿಸುತ್ತದೆ. ಈ ಹಿಂದೆ ಬ್ಯಾಂಕ್‍ಗಳಿಗೆ ಸಾವಿರಾರು ಕೋಟಿ ವಂಚನೆ ಮಾಡಿದ್ದ ವಿಜಯ ಮಲ್ಯ, ವಜ್ರ ವ್ಯಾಪಾರಿ ನೀರವ್ ಮೋದಿ, ಐಪಿಎಲ್ ಹಗರಣದ ಕಿಂಗ್‍ಪೀನ್ ಲಲಿತ್ ಮೋದಿ ಸೇರಿದಂತೆ ಅನೇಕರು ಇದೇ ರೀತಿ ವಿದೇಶಕ್ಕೆ ತೆರಳಿ ತಲೆ ಮರೆಸಿಕೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ