ಶಾಂಘೈ ಶೃಂಗ ಸಭೆಗೆ ತೆರಳಲು ಪ್ರಧಾನಿ ಮೋದಿ ಪಾಕ್ ವಾಯುಮಾರ್ಗ ಬಳಸುತ್ತಿಲ್ಲ: ವಿದೇಶಾಂಗ ಇಲಾಖೆ

ನವದೆಹಲಿ: ಬಿಶ್ಕೆಕ್ ನಲ್ಲಿ ಜೂನ್ 13 ಮತ್ತು 14ರಂದು ನಡೆಯಲಿರುವ ಶಾಂಘೈ ಸಹಕಾರ ಸಂಘದ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಯವರು ಪಾಕ್ ವಾಯುಮಾರ್ಗ ಬದಲಿಗೆ ಒಮನ್ ಮೂಲಕ ತೆರಳಲು ನಿರ್ಧರಿಸಿದ್ದಾರೆ.

ಈ ಮೊದಲು ಪ್ರಧಾನಿ ಮೋದಿ ವಿಮಾನ ಪಾಕಿಸ್ತಾನದ ವಾಯುಮಾರ್ಗದಲ್ಲಿ ಸಂಚರಿಸಲು ಭಾರತ ಪಾಕಿಸ್ತಾನಕ್ಕೆ ಮನವಿ ಮಾಡಿತ್ತು. ಇದಕ್ಕೆ ಪಾಕಿಸ್ತಾನವೂ ಸಹ ತಾತ್ವಿಕ ಒಪ್ಪಿಗೆ ನೀಡಿತ್ತು. ಆದರೆ ಇದೀಗ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಅವರು ಪ್ರಧಾನಿ ಪಾಕ್ ವಾಯುಮಾರ್ಗದಲ್ಲಿ ತೆರಳುತ್ತಿಲ್ಲ. ಬದಲಿಗೆ ಒಮನ್, ಇರಾನ್ ಮತ್ತು ಸೆಂಟ್ರಲ್ ಏಷ್ಯಾ ದೇಶಗಳ ಮೂಲಕ ಬಿಶ್ಕೆಕ್ ಗೆ ತೆರಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಶಾಂಘೈ ಸಹಕಾರ ಸಂಘದ ಶೃಂಗಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕೂಡ ಭಾಗವಹಿಸಲಿದ್ದಾರೆ. ಇತ್ತೀಚೆಗೆ ಪಾಕ್ ಪ್ರಧಾನಿ ಭಾರತ ಪ್ರಧಾನಿಗೆ ಪತ್ರ ಬರೆದು ಭೌಗೋಳಿಕ ಮತ್ತು ರಾಜಕೀಯ ಸಮಸ್ಯೆಗಳಿಗೆ ಹಾಗೂ ಎರಡೂ ದೇಶಗಳ ನಡುವಿನ ಜಮ್ಮು-ಕಾಶ್ಮೀರ ವಿವಾದಗಳನ್ನು ಬಗೆಹರಿಸಲು ಪರಿಹಾರದ ಅಗತ್ಯವಿದೆ ಎಂದು ಹೇಳಿದ್ದರು. ಶಾಂತಿ ಮಾತುಕತೆಯ ತನ್ನ ಪ್ರಸ್ತಾಪಕ್ಕೆ ಭಾರತ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಬಹುದು ಎಂಬ ಆಶಾ ಭಾವನೆಯಲ್ಲಿ ಪಾಕಿಸ್ತಾನ ಇನ್ನೂ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಶಾಂಘೈ ಶೃಂಗಸಭೆಯ ವೇಳೆ ಭಾರತ ಮತ್ತು ಪಾಕಿಸ್ತಾನ ಪ್ರಧಾನ ಮಂತ್ರಿಗಳ ನಡುವೆ ಯಾವುದೇ ಮಾತುಕತೆಗಳು ನಿಗದಿಯಾಗಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ