
ಬೆಂಗಳೂರು, ಜೂ.12- ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಬಿಬಿಎಂಪಿ ಆಡಳಿತದ ಕೊನೆಯ ಮೇಯರ್ ಸ್ಥಾನಕ್ಕೆ ಈಗಾಗಲೇ ಲಾಬಿ ಶುರುವಾಗಿದೆ.
ಹಾಲಿ ಮೇಯರ್ ಗಂಗಾಂಬಿಕೆ ಅವರ ಅವಧಿ ಸೆಪ್ಟೆಂಬರ್ಗೆ ಅಂತ್ಯಗೊಳ್ಳುತ್ತಿದ್ದು , ಮಹಾಪೌರರ ಗದ್ದುಗೆ ಏರಲು ಆಕಾಂಕ್ಷಿಗಳು ತಮ್ಮ ರಾಜಕೀಯ ಗಾಡ್ಫಾದರ್ಗಳ ಮೊರೆ ಹೋಗಿದ್ದಾರೆ.
ಇವರ ಜತೆಗೆ ಮೂರು ಪಕ್ಷಗಳಲ್ಲಿ 16 ಸದಸ್ಯರನ್ನು ಹೊಂದಿರುವ ಮುಸ್ಲಿಂ ಸಮುದಾಯಕ್ಕೆ ಮುಂದಿನ ಮೇಯರ್ ಅವಕಾಶ ಕಲ್ಪಿಸಿಕೊಡಬೇಕು ಎಂಬ ಕೂಗು ಕೇಳಿ ಬಂದಿದೆ.
ಹೀಗಾಗಿ ಪಾಲಿಕೆ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್, ಮಾಜಿ ನಾಯಕ ರಿಜ್ವಾನ್, ಜೆಡಿಎಸ್ನ ಇಮ್ರಾನ್ ಪಾಷ ಸೇರಿದಂತೆ ಎಲ್ಲಾ 16 ಅಲ್ಪಸಂಖ್ಯಾತ ಬಿಬಿಎಂಪಿ ಸದಸ್ಯರು ಖಾಸಗಿ ಹೊಟೇಲ್ನಲ್ಲಿ ಸಭೆ ನಡೆಸಿ ಮೇಯರ್ ಸ್ಥಾನ ತಮಗೆ ನೀಡುವಂತೆ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ತರಲು ತೀರ್ಮಾನಿಸಿದ್ದಾರೆ.
ಮುಂದಿನ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಕಳೆದ ಹಲವಾರು ವರ್ಷಗಳಿಂದ ಅಲ್ಪಸಂಖ್ಯಾತರಿಗೆ ಗಗನ ಕುಸುಮವಾಗಿರುವ ಮೇಯರ್ ಸ್ಥಾನವನ್ನು ಮುಸಲ್ಮಾನ್ ಸದಸ್ಯರಿಗೆ ನೀಡಬೇಕು ಎಂದು ಎಲ್ಲಾ ಸದಸ್ಯರುಗಳು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮುಸಲ್ಮಾನ್ ಮತ ಬಾಂಧವರು ಜೆಡಿಎಸ್-ಕಾಂಗ್ರೆಸ್ ಪಕ್ಷಗಳತ್ತ ಒಲವು ತೋರಿದ್ದಾರೆ.ಇದರ ಜತೆಗೆ ಮುಂದಿನ ವರ್ಷ ಬಿಬಿಎಂಪಿಗೆ ಚುನಾವಣೆ ನಡೆಯುತ್ತಿರುವುದರಿಂದ ಈ ಬಾರಿ ನಮಗೆ ಮೇಯರ್ ಸ್ಥಾನ ನೀಡಬೇಕೆನ್ನುವುದು ಮುಸಲ್ಮಾನ್ ಸದಸ್ಯರ ಬೇಡಿಕೆಯಾಗಿದೆ.