ಐಎಂಎ ವಂಚನೆ ಪ್ರಕರಣ-ಜನರಲ್ಲಿ ಅನುಮಾನ ಮೂಡಿಸುತ್ತಿರುವ ರಾಜಕಾರಣದ ಥಳಕು

ಬೆಂಗಳೂರು, ಜೂ.12- ಐಎಂಎ ವಂಚನೆ ಪ್ರಕರಣ ದಿನೇ ದಿನೇ ಹೊಸ ಹೊಸ ವಿಷಯಗಳು ಹೊರ ಬರುತ್ತಿದ್ದು , ಈಗ ರಾಜಕಾರಣದ ಥಳಕು ಜನರಲ್ಲಿ ಭಾರೀ ಅನುಮಾನ ಮೂಡಿಸುತ್ತಿದೆ.

ಕಳೆದ ಹಲವು ವರ್ಷಗಳಿಂದ ಈಗ ನಾಪತ್ತೆಯಾಗಿರುವ ಮೊಹಮದ್ ಮನ್ಸೂರ್ ಖಾನ್ ಹಲವಾರು ರಾಜಕಾರಣಿಗಳ ಜತೆ ಸಖ್ಯ ಬೆಳೆಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು , ಇದು ಯಾವ ತಿರುವು ಪಡೆಯುತ್ತದೋ ಎಂದು ಕಾದು ನೋಡಬೇಕಾಗಿದೆ.

ಪ್ರಮುಖವಾಗಿ ಮುಸ್ಲಿಂ ಜನಪ್ರತಿನಿಧಿಗಳ ಜತೆಗೇ ಕೆಲವು ಪ್ರಭಾವಿ ರಾಜಕಾರಣಿಗಳು ಕೂಡ ಈ ಸಂಸ್ಥೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ಕೇಳಿ ಬರುತ್ತಿದೆ.

ಮನ್ಸೂರ್ ಬಿಡುಗಡೆ ಮಾಡಿದ್ದಾನೆ ಎಂದು ಹೇಳಲಾಗಿರುವ ಆಡಿಯೋದಲ್ಲಿ ತಿಳಿಸಿರುವಂತೆ ಕೆಲ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಲಂಚದ ರೂಪದಲ್ಲಿ ಹಣ ಹಾಗೂ ಒಡವೆಗಳನ್ನು ನೀಡುತ್ತಿದ್ದರು. ಇದರ ಆಳ ಹುಡುಕುತ್ತಾ ಹೋದರೆ ಕುತೂಹಲಕಾರಿ ಅಂಶಗಳು ಕೂಡ ಹೊರ ಬರುತ್ತದೆ ಐಎಂಎ ಸಂಸ್ಥೆಯಲ್ಲಿ ಹೂಡಿಕೆ ಮಾಡಿ ಆತಂಕಗೊಂಡಿರುವ ಕೆಲವರು ಹೇಳುತ್ತಿದ್ದಾರೆ.

ಕೈನಲ್ಲಿ ಹಣ ಪಡೆದರೆ ಲಂಚವಾಗುತ್ತದೆ. ಅದನ್ನು ಚಿನ್ನದಂಗಡಿಗಳಲ್ಲಿ ಅಷ್ಟೇ ಪ್ರಮಾಣದ ಆಭರಣಗಳನ್ನು ಕೊಳ್ಳುವುದು ಒಂದು ದಾರಿಯಾಗಿದೆ. ಯಾವುದೇ ಅಳುಕಿಲ್ಲದೆ ಬೇಕಾದಾಗ ಕಂಡ ಕಂಡ ಆಭರಣಗಳನ್ನು ಪಡೆದು ಧರಿಸಿ ನಂತರ ಅಲ್ಲೇ ತಂದುಕೊಟ್ಟು ಲಾಕರ್‍ನಲ್ಲಿ ಇಟ್ಟು ತಮ್ಮ ಖಜಾನೆಯನ್ನು ಭದ್ರಪಡಿಸಿಕೊಳ್ಳುವ ಭ್ರಷ್ಟ ರಾಜಕಾರಣಿಗಳು ಇದ್ದಾರೆ ಎಂದು ಹೇಳಲಾಗುತ್ತಿದೆ.

ಇದಕ್ಕೆ ಕೆಲ ಅಧಿಕಾರಿಗಳು ಕೂಡ ಸಾಥ್ ನೀಡುತ್ತಿದ್ದರು ಎಂದು ಆರೋಪಿಸಲಾಗುತ್ತಿದ್ದು , ಅವರ ಪಾತ್ರವೂ ಇದ್ದೇ ಇರುತ್ತದೆ. ಈಗ ಎಸ್‍ಐಟಿ ತನಿಖೆಯಿಂದ ಇವೆಲ್ಲವೂ ಬೆಳಕಿಗೆ ಬರುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ