ಬಿಎಸ್‍ವೈ ಬಳಿಕ ರಾಜ್ಯ ಬಿಜೆಪಿ ಗದ್ದುಗೆ ಯಾರಿಗೆ?

ಬೆಂಗಳೂರು: ವಿಧಾನಸಭೆ ಚುನಾವಣೆ ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆಯ ಮಾತು ಕೇಳಿ ಬರುತ್ತಿದೆ. ಹಾಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕರ ಬದಲಾವಣೆಯ ಕೂಗು ರಾಜ್ಯ ಕಮಲ ಅಂಗಳದಲ್ಲಿ ಬಹುದಿನಗಳಿಂದ ಕೇಳಿ ಬರುತ್ತಿದೆ. ಇತ್ತ ಹೈಕಮಾಂಡ್ ನಿಲುವಿಗೆ ಬದ್ಧ ಎಂದು ಯಡಿಯೂರಪ್ಪನವರು ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ.

ರಾಜ್ಯಾಧ್ಯಕ್ಷರ ಬದಲಾವಣೆಯ ಕುರಿತಾಗಿ ಇದೇ ಜೂನ್ 13ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಂಬಂಧ ಎಲ್ಲ ರಾಜ್ಯಗಳ ಬಿಜೆಪಿ ಅಧ್ಯಕ್ಷರೂ, ಪ್ರಧಾನ ಕಾರ್ಯದರ್ಶಿಗಳೂ, ಪದಾಧಿಕಾರಿಗಳಿಗೂ ಸಭೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಒಂದು ವೇಳೆ ಹೈಕಮಾಂಡ್ ರಾಜ್ಯಾಧ್ಯಕ್ಷರ ಬದಲಾವಣೆಗೆ ಮುಂದಾದ್ರೆ ಯಡಿಯೂರಪ್ಪನವರು ತಮ್ಮ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಶಾಸಕ ಅರವಿಂದ್ ಲಿಂಬಾವಳಿ ಅವರ ಹೆಸರು ಸೂಚಿಸಲು ಮುಂದಾಗುವ ಸಾಧ್ಯತೆಗಳಿವೆ. ಈ ನಡುವೆ ಆರ್‌ಎಸ್‌ಎಸ್ ಸಹ ಬಿಜೆಪಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ್ದು, ಯಡಿಯೂರಪ್ಪರಿಗೆ ಶಾಕ್ ನೀಡಲು ನಿರ್ಧರಿಸಿದೆ ಎನ್ನಲಾಗಿದೆ.

ಆರ್ಎಸ್ಎಸ್ ಬತ್ತಳಿಕೆ:
ಹೊಸ ಅಧ್ಯಕ್ಷರ ಪಟ್ಟಿಯಲ್ಲಿ ಒಕ್ಕಲಿಗ ನಾಯಕ, ಮಾಜಿ ಡಿಸಿಎಂ ಆರ್. ಅಶೋಕ್ ಮತ್ತು ಶಾಸಕ ಸಿ.ಟಿ.ರವಿ ಹೆಸರನ್ನು ಆರ್‌ಎಸ್‌ಎಸ್ ಅಮಿತ್ ಶಾರಿಗೆ ಕಳುಹಿಸಲು ಮುಂದಾಗಿದೆ. ಈ ಮೂಲಕ ಸಿಎಂ ಮತ್ತು ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಆರ್.ಅಶೋಕ್ ಅವರನ್ನು ಮುನ್ನಲೆಗೆ ಆರ್‌ಎಸ್‌ಎಸ್ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ. ಈ ಎಲ್ಲದರ ನಡುವೆ ಶಿರಸಿ ಶಾಸಕ ವಿಶ್ವೇಶ್ವೇರ ಹೆಗಡೆ ಕಾಗೇರಿ, ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೆಸರು ಪ್ರಸ್ತಾಪ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ