
ಬೆಂಗಳೂರು, ಜೂ.11- ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ಈಗಾಗಲೇ ರಾಜೀನಾಮೆ ನೀಡಿದ್ದು, ಮತ್ತೆ ಆ ಸ್ಥಾನದಲ್ಲಿ ಮುಂದುವರೆಯುವುದಿಲ್ಲ ಎಂದು ಶಾಸಕ ಎಚ್.ವಿಶ್ವನಾಥ್ ಇಂದಿಲ್ಲಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನೀಡಿರುವ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ತಾವು ಮತ್ತೆ ಮುಂದುವರೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಯಲ್ಲಿ ಜೆಡಿಎಸ್‍ವತಿಯಿಂದ ಮುಸ್ಲಿಂರೊಬ್ಬರನ್ನು ಸಚಿವರನ್ನಾಗಿ ಮಾಡಬೇಕು ಎಂದು ಹೇಳಿದರು.
ಜೆಡಿಎಸ್ ಪಕ್ಷದಿಂದ ಸಚಿವ ಸಂಪುಟದಲ್ಲಿ ಮುಸ್ಲಿಂರೊಬ್ಬರಿಗೆ ಅವಕಾಶ ನೀಡಬೇಕು. ಜೆಡಿಎಸ್ ಪಾಲಿನ ಎರಡು ಸಚಿವ ಸ್ಥಾನಗಳು ಖಾಲಿ ಇವೆ. ಒಂದು ಸ್ಥಾನವನ್ನು ಮುಸ್ಲಿಂರಿಗೆ, ಮತ್ತೊಂದು ಸ್ಥಾನವನ್ನು ಈ ಹಿಂದೆಯೇ ದಲಿತರಿಗೆ ನೀಡಬೇಕಾಗಿತ್ತು. ಆ ಬಗ್ಗೆ ಚರ್ಚೆಯೂ ಆಗಬೇಕಿತ್ತು ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಂರು ಜೆಡಿಎಸ್‍ಗೆ ನಿರೀಕ್ಷಿತ ಬೆಂಬಲ ನೀಡದಿರಬಹುದು.ಆದರೆ, ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅವರು ಬೆಂಬಲ ನೀಡಿದ್ದಾರೆ.ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದಿರುವ ಜೆಡಿಎಸ್ ಅಭ್ಯರ್ಥಿಗಳ ಪೈಕಿ ಶೇ.40ರಷ್ಟು ಮುಸ್ಲಿಂರಿದ್ದು, ಅದರ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.
ದೇಶದ ರಾಜಕೀಯ ಪರಿಸ್ಥಿತಿ ಬದಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟದಲ್ಲಿ ಮುಸ್ಲಿಂರಿಗೆ ಅವಕಾಶ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಂರೊಬ್ಬರನ್ನು ಮಂತ್ರಿ ಮಾಡಿದ್ದರು.ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ನಮ್ಮ ಪಕ್ಷದ ವತಿಯಿಂದ ಮುಸ್ಲಿಂರೊಬ್ಬರನ್ನು ಮಂತ್ರಿ ಮಾಡಿಲ್ಲ ಎಂದು ಹೇಳಿದರು.
ಮುಂದಿನ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಜೆಡಿಎಸ್ ಮುಸ್ಲಿಂರೊಬ್ಬರನ್ನು ಮಂತ್ರಿಯನ್ನಾಗಿ ಮಾಡಬೇಕೆಂದು ವಿಶ್ವನಾಥ್ ಮನವಿ ಮಾಡಿದರು.
ದೇವೇಗೌಡರ ಮನವೊಲಿಸುವೆ:
ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ದೇವೇಗೌಡರು ನಿಮ್ಮ ಮನವೊಲಿಸಲಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ವಿಶ್ವನಾಥ್, ನಾನೇ ಅವರ ಮನವೊಲಿಸುವೆ. ಪಕ್ಷದಲ್ಲಿ ಕಾರ್ಯಕರ್ತನಾಗಿ ಮುಂದುವರೆಯುತ್ತೇನೆ. ಹುಣಸೂರು ಶಾಸಕನಾಗಿ ಕೆಲಸ ಮಾಡುತ್ತೇನೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಹೇಳಿದರು.