ರೈತರ ಬ್ಯಾಂಕ್ ಖಾತೆಗಳಿಂದ ಸಾಲಾಮನ್ನಾ ಹಣ ವಾಪಾಸ್-ಸಿಎಂ ರೈತರ ಕ್ಷಮೆ ಕೇಳಲಿ-ಮಾಜಿ ಸಿಎಂ ಯಡಿಯೂರಪ್ಪ

ಬೆಂಗಳೂರು, ಜೂ.11- ಚುನಾವಣೆಗೂ ಮುನ್ನ ಸಾವಿರಾರು ರೈತರ ಸಾಲಮನ್ನಾ ಮಾಡಿ ಬ್ಯಾಂಕ್‍ಗಳಿಗೆ ಜಮಾ ಮಾಡಿದ್ದ ಹಣವನ್ನು ವಾಪಸ್ ಪಡೆದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡಲೇ ನಾಡಿನ ಅನ್ನದಾತರ ಕ್ಷಮೆ ಕೇಳಬೇಕೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ರೈತರ ಬ್ಯಾಂಕ್ ಖಾತೆಗಳಿಂದ ಸಾಲಮನ್ನಾ ಹಣವನ್ನು ವಾಪಸ್ ಪಡೆಯಲಾಗಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ.ಚುನಾವಣೆಗೂ ಮುನ್ನ ಯಾವ ಕಾರಣಕ್ಕಾಗಿ ರೈತರ ಸಾಲಮನ್ನಾ ಮಾಡಿ ಬ್ಯಾಂಕ್‍ಗಳಿಗೆ ಹಣ ಜಮಾ ಮಾಡಲಾಗಿತ್ತು ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೂ ಮುನ್ನ ರೈತರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿ ಅವರ ಖಾತೆಗಳಿಗೆ ಹಣ ಹಾಕಲಾಗಿದೆ.ಈ ದಿಢೀರನೆ ಅದೇ ಹಣವನ್ನು ಹಿಂಪಡೆಯಲಾಗಿದೆ. ಇದು ದೇಶದ ಇತಿಹಾಸದಲ್ಲಿ ಕಂಡು ಕೇಳರಿಯದ ಘಟನೆ ಎಂದು ದಿಗ್ಭ್ರಮೆ ವ್ಯಕ್ತಪಡಿಸಿದರು.

24 ಗಂಟೆಯೊಳಗೆ ಸಾಲಮನ್ನಾ ಮಾಡುವುದಾಗಿ ಕುಮಾರಸ್ವಾಮಿ ರಾಜ್ಯದ ಜನತೆಗೆ ಆಶ್ವಾಸನೆ ಕೊಟ್ಟಿದ್ದರು. ಹಾಗಾಗಿ ಅವರಿಗೆ ಮತದಾರರು 38 ಸ್ಥಾನ ನೀಡಿದರು. ಈಗ ಸಾಲಮನ್ನಾ ಯೋಜನೆ ಎಂಬುದು ಕೇವಲ ಭರವಸೆಯಾಗಿಯೇ ಉಳಿದಿದೆ.ರೈತರಿಗೆ ಬ್ಯಾಂಕ್ ಅಧಿಕಾರಿಗಳು ದಿನನಿತ್ಯ ನೋಟಿಸ್ ಕೊಟ್ಟು ಕಿರುಕುಳ ನೀಡುತ್ತಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ನೀವು ಜಮೆಯಾದ ಹಣವನ್ನು ಯಾವ ಕಾರಣಕ್ಕಾಗಿ ಹಿಂಪಡೆದಿದ್ದೀರಿ ಎಂಬುದನ್ನು ಬಹಿರಂಗಪಡಿಸಬೇಕು.ಅನೇಕ ರೈತರಿಗೆ ನೋಟಿಸ್ ನೀಡುತ್ತಿರುವುದರಿಂದ ಹೊಸದಾಗಿ ಸಾಲ ಸಿಗುತ್ತಿಲ್ಲ. ಇದರಿಂದ ಅನ್ನದಾತ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾನೆ ಎಂದು ಕಿಡಿಕಾರಿದರು.

ಸಮ್ಮಿಶ್ರ ಸರ್ಕಾರದ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ.ಬರ, ಸಾಲಮನ್ನಾ ಸೇರಿದಂತೆ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ 14 ರಿಂದ ಮೂರು ದಿನಗಳ ಕಾಲ ಪ್ರತಿಭಟನೆ ಮಾಡಲಾಗುವುದು.ಯಾವುದೇ ಕಾರಣಕ್ಕೂ ಜಿಂದಾಲ್ ಕಂಪೆನಿಗೆ ಜಮೀನು ನೀಡಬಾರದೆಂದು ಒತ್ತಾಯಿಸಿದರು.

ಹಣ ಹಿಂದಿರುಗಿಸಲು ಒತ್ತಾಯ: ಐಎಂಎ ಜ್ಯುವೆಲ್ಸ್ ಹೂಡಿಕೆದಾರರಲ್ಲಿ ಸಾರ್ವಜನಿಕರಿಗೆ ಕೋಟ್ಯಂತರ ರೂ. ವಂಚನೆ ಮಾಡಿರುವ ಮಾಲೀಕನನ್ನು ತಕ್ಷಣವೇ ಎಲ್ಲೇ ಇದ್ದರೂ ಪತ್ತೆ ಹಚ್ಚಿ ಜನರ ಹಣವನ್ನು ಹಿಂತಿರುಗಿಸಲು ರಾಜ್ಯ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಜನರು ನಂಬಿಕೆ ಇಟ್ಟು ಐಎಂಎ ಸಂಸ್ಥೆಯಲ್ಲಿ ಹಣವನ್ನು ಹೂಡಿಕೆ ಮಾಡಿದ್ದರು. ಆದರೆ, ಇದೀಗ ಇದ್ದಕ್ಕಿದ್ದಂತೆ ಅಂಗಡಿ ಮಾಲೀಕ ನಾಪತ್ತೆಯಾಗಿರುವುದರಿಂದ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಆತ ಎಲ್ಲೇ ಇದ್ದರೂ ಪೊಲೀಸರು ಪತ್ತೆ ಮಾಡಿ ಕರೆತರಬೇಕೆಂದು ಒತ್ತಾಯಿಸಿದರು.

ಇದರಲ್ಲಿ ಯಾರೇ ತಪ್ಪು ಮಾಡಲಿ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು. ಶಾಸಕ ರೋಷನ್ ಬೇಗ್ ಸೇರಿದಂತೆ ಮತ್ತೊಬ್ಬರ ಹೆಸರು ಹೇಳಲು ನಾನು ಇಷ್ಟ ಪಡುವುದಿಲ್ಲ. ಸಾರ್ವಜನಿಕರಿಗೆ ವಂಚನೆ ಮಾಡಿರುವವರನ್ನು ಕೂಡಲೇ ವಶಕ್ಕೆ ಪಡೆದು ಹೂಡಿಕೆ ಮಾಡಿರುವವರಿಗೆ ಹಣ ಹಿಂದಿರುಗಿಸಲು ಕ್ರಮ ಕೈಗೊಳ್ಳಲಿ ಎಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ