ಬೆಂಗಳೂರು, ಜೂ.11-ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲಗಳ ವರ್ಗೀಕರಣ ಮಾಡುವಲ್ಲಿ ಲೋಪವಾಗಿದ್ದರಿಂದ ರಾಜ್ಯದಲ್ಲಿ 13,123 ರೈತರಿಗೆ ತೊಂದರೆಯಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಸಮ್ಮೇಳನದಲ್ಲಿ ಮಾಧ್ಯಮಗಳ ಕುರಿತು ಮಾತನಾಡಿದ ಅವರು, ರಾಜ್ಯ ಸರ್ಕಾರ ಲೋಕಸಭೆ ಚುನಾವಣೆ ಬಳಿಕ ಸಾಲ ಮನ್ನಾದ ಹಣವನ್ನು ವಾಪಸ್ ಪಡೆಯುತ್ತಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡುತ್ತಿವೆ.
ಇದು ಸತ್ಯಕ್ಕೆ ದೂರವಾದ ವರದಿ. ಸರ್ಕಾರ ರೈತರ ಸಾಲ ಮನ್ನಾದ ಹಣವನ್ನು ವಾಪಸ್ ಪಡೆಯುವುದಿಲ್ಲ. ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲಗಳ ವರ್ಗೀಕರಣ ಮಾಡುವಾಗ ಲೋಪಗಳನ್ನು ಮಾಡಿವೆ. ಹೀಗಾಗಿ ಯಾದಗಿರಿಯ 200 ರೈತರ ಸಾಲದ ಹಣ ರೈತರ ಖಾತೆಯಿಂದ ಮತ್ತೆ ವಾಪಸ್ ಹೋಗಿದೆ ಎಂಬ ವರದಿಯಾಗುತ್ತಿದೆ. ಯಾದಗಿರಿಯಲ್ಲಿ 200 ಮಂದಿ ರೈತರದಷ್ಟೇ ಅಲ್ಲ, 809 ಮಂದಿ ರೈತರ ಸಾಲದ ಹಣ ವಾಪಸ್ ಹೋಗಿದೆ.ಬ್ಯಾಂಕ್‍ಗಳು ಮಾಡಿರುವ ತಪ್ಪಿನಿಂದಾಗಿ 13, 988 ರೈತರು ಗೊಂದಲಕ್ಕೆ ಸಿಲುಕುವಂತಾಗಿದೆ. ಈ ಲೋಪವನ್ನು ಸರಿಪಡಿಸಲು ಜೂ..14ರಂದು 2.30ಕ್ಕೆ ರಾಜ್ಯಮಟ್ಟದ ಬ್ಯಾಂಕರುಗಳ ಸಭೆ ಕರೆಯಲಾಗಿದೆ ಎಂದು ಹೇಳಿದರು.
ಸತ್ಯಾಸತ್ಯತೆಯನ್ನು ತಿಳಿಯದೆ ವರದಿ ಮಾಡುವ ಮೂಲಕ ಮಾಧ್ಯಮಗಳು ಜನರ ದಾರಿ ತಪ್ಪಿಸುತ್ತಿವೆ. ಮಾಧ್ಯಮಗಳು ಅಭಿವೃದ್ಧಿ ಬೇಕೋ ಅಥವಾ ರಾಜ್ಯವನ್ನು ಹಾಳು ಮಾಡಬೇಕೋ ಎಂಬುದನ್ನು ಸ್ವತಃ ನಿರ್ಧರಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‍ಗಳು ಬರುವುದು ಪ್ರಧಾನಿ ನರೇಂದ್ರ ಮೋದಿಯವರ ಅಧೀನದಲ್ಲಿ.
ಮೋದಿಯವರನ್ನು ಹೊಗಳಿ ಅಟ್ಟಕ್ಕೇರಿಸುವ ಮಾಧ್ಯಮಗಳು, ರಾಷ್ಟ್ರೀಕೃತ ಬ್ಯಾಂಕ್‍ಗಳ ಲೋಪಗಳ ಬಗ್ಗೆ ಏಕೆ ಪ್ರಶ್ನೆ ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ರಾಜ್ಯಸರ್ಕಾರ ಸಾಲ ಮನ್ನಾದ ವಿಷಯದಲ್ಲಿ ಸಂಪೂರ್ಣ ಬದ್ಧತೆ ಹೊಂದಿದೆ.ಚುನಾವಣೆಗೂ ಇದಕ್ಕೂ ಸಂಬಂಧವಿಲ್ಲ. ಎರಡು ವರ್ಷಗಳ ಅವಧಿಗೆ 25 ಸಾವಿರ ಕೋಟಿ ಸಾಲ ಮನ್ನಾ ಮಾಡಲು ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ. ವಾಣಿಜ್ಯ ಬ್ಯಾಂಕ್‍ಗಳಲ್ಲಿ 7.49 ಲಕ್ಷ ರೈತರ ಸಾಲ ಮನ್ನಾಕ್ಕೆ 3,929 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಸಹಕಾರ ಬ್ಯಾಂಕುಗಳ 11.20 ಲಕ್ಷ ರೈತರಿಗೆ 4,80 ಕೋಟಿ ಬಿಡುಗಡೆಯಾಗಿದೆ. ಹೆಚ್ಚುವರಿಯಾಗಿ 1200 ಕೋಟಿ ರೂ.ಗಳನ್ನು ಸಹಕಾರ ಸಂಸ್ಥೆಗಳಿಗೆ ನೀಡಲಾಗಿದ್ದು, ಸಾಲ ತಿರುವಳಿಯ ಅವಧಿ ಮುಗಿಯುವ ವೇಳೆಗೆ ಈ ಅನುದಾನವನ್ನು ಬಳಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.
ಬ್ಯಾಂಕ್‍ಗಳು ಮಾಡುವ ತಪ್ಪಿಗೆ ಕರ್ನಾಟಕ ಸರ್ಕಾರವನ್ನೇ ದೂರುವುದು ಸರಿಯಲ್ಲ. ನಮ್ಮಿಂದ ಯಾವುದೇ ಲೋಪವಾಗಿಲ್ಲ. ಯಾದಗಿರಿಯಲ್ಲಿನ ಬ್ಯಾಂಕ್‍ಗಳು ಈಗಾಗಲೇ ತಮ್ಮಿಂದ ಲೋಪವಾಗಿದೆ ಎಂಬುದನ್ನು ಒಪ್ಪಿಕೊಂಡಿವೆ. ಯಾವುದೇ ಸುದ್ದಿ ಪ್ರಕಟಿಸುವ ಮುನ್ನ ಮಾಧ್ಯಮಗಳು ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದು ಅವರು ಹೇಳಿದರು.
ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಹರಿಯುವ ನದಿ ಹೊಳೆಗಳನ್ನು ದಾಟಲು ಕಾಲುಸಂಕ ಸೇತುವೆ ನಿರ್ಮಿಸಲು ನಮ್ಮ ಸರ್ಕಾರ ಕ್ರಮ ಕೈಗೊಂಡಿದ್ದು, 1804 ಸೇತುವೆಗಳ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. 187 ಕೋಟಿ ವೆಚ್ಚದಲ್ಲಿ ನಿರ್ವಹಣೆಗೊಳ್ಳುತ್ತಿರುವ ಈ ಸೇತುವೆಗಳ ಕಾಮಗಾರಿ ಮೂರ್ನಾಲ್ಕು ತಿಂಗಳಲ್ಲಿ ಮುಗಿಯಲಿದೆ. ಮೊದಲ ಹಂತದಲ್ಲಿ 953 ಸೇತುವೆಗಳು ಪೂರ್ಣಗೊಳ್ಳಲಿದ್ದು, ಶೀಘ್ರವೇ ಎಲ್ಲಾ ಕಾಮಗಾರಿಗಳು ಮುಕ್ತಾಯಗೊಳ್ಳಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತೀರ್ಥಹಳ್ಳಿಯಲ್ಲಿ ಶಾಲಾ ಬಾಲಕಿಯೊಬ್ಬಳು ನೀರಿನಲ್ಲಿ ಕೊಚ್ಚಿ ಹೋಗಿದ್ದನ್ನು ಗಮನಿಸಿದ ನಮ್ಮ ಸರ್ಕಾರ ಕಾಲುಸಂಕ ಸೇತುವೆಗಳ ನಿರ್ಮಾಣಕ್ಕೆ ಕ್ರಮಕೈಗೊಂಡಿದೆ. ಕೆಲವೆಡೆ ಕೆಲಸಗಳೇ ಆರಂಭವಾಗಿಲ್ಲ ಎಂಬ ವರದಿಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಮೂರ್ನಾಲ್ಕು ತಿಂಗಳಲ್ಲಿ ಎಲ್ಲಾ ಸೇತುವೆ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಹೇಳಿದರು.