ಚಂಡಮಾರುತ ಹಿನ್ನಲೆ ಮುಂಗಾರು ಮತ್ತಷ್ಟು ವಿಳಂಬವಾಗುವ ಸಾಧ್ಯತೆ

ಬೆಂಗಳೂರು, ಜೂ.11-ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ಚಂಡಮಾರುತದ ಪ್ರಭಾವದಿಂದಾಗಿ ಈ ಬಾರಿಯ ಮುಂಗಾರು ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್‍ರೆಡ್ಡಿ ತಿಳಿಸಿದರು.

ಭಾರತೀಯ ಹವಾಮಾನ ಇಲಾಖೆ ರಾಜ್ಯಕ್ಕೆ ಮುಂಗಾರು ಪ್ರವೇಶ ಮಾಡಿರುವುದನ್ನು ಖಚಿತಪಡಿಸಿಲ್ಲ. ಇಂದು ಅಥವಾ ನಾಳೆ ಮುಂಗಾರು ಪ್ರವೇಶದ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂದು ತಿಳಿಸಿದರು.

ಚಂಡಮಾರುತ ದುರ್ಬಲಗೊಂಡ ನಂತರ ಮತ್ತೆ ಮುಂಗಾರು ಚೇತರಿಕೆಯಾಗಿ ರಾಜ್ಯದ ಒಳನಾಡು ಪ್ರವೇಶಿಸಬೇಕಾಗುತ್ತದೆ. ಈ ಪ್ರಕ್ರಿಯೆಗೆ ಕನಿಷ್ಠ ನಾಲ್ಕೈದು ದಿನಗಳು ಬೇಕಾಗಬಹುದು. ಹೀಗಾಗಿ ರಾಜ್ಯ ಒಳನಾಡನ್ನ್ನು ಮುಂಗಾರು ಪ್ರವೇಶಿಸಲು ಸುಮಾರು ಐದು ದಿನಗಳ ಕಾಲ ವಿಳಂಬವಾಗುವ ಸಾಧ್ಯತೆಗಳಿವೆ ಎಂದರು.

ಚಂಡಮಾರುತದ ಪ್ರಭಾವ ಅಷ್ಟಾಗಿ ಕರ್ನಾಟಕದ ಮೇಲೆ ಆಗುವುದಿಲ್ಲ. ಆದರೆ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.

ಅರಬ್ಬೀ ಸಮುದ್ರದಲ್ಲಿ ಹೆಚ್ಚಾಗಿ ಚಂಡಮಾರುತದ ಪ್ರಭಾವವಿದ್ದು, ಆರು ಮೀಟರ್‍ವರೆಗೂ ಸಮುದ್ರದ ಅಲೆಗಳ ಅಬ್ಬರವಿರುತ್ತದೆ ಎಂಬ ಮುನ್ಸೂಚನೆ ಇದೆ.

ಸುಮಾರು ಗಂಟೆಗೆ 100 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಗಳಿದ್ದು, ಈಗಾಗಲೇ ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.

ರಾಜ್ಯದ ಉತ್ತರ ಕರ್ನಾಟಕ ಒಳನಾಡಿನಲ್ಲಿ ಚದುರಿದಂತೆ ಮಳೆಯಾಗಿದೆ. ಇದು ಪೂರ್ವ ಮುಂಗಾರಿನ ಮಳೆಯಾಗಿದೆ.ಸದ್ಯಕ್ಕೆ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ