ಜಿಂದಾಲ್‍ಗೆ ಜಮೀನು ನೀಡುವ ನಿರ್ಧಾರವನ್ನು ಹಿಂಪಡೆಯಲು ತೀರ್ಮಾನಿಸಿದ ಸರ್ಕಾರ

ಬೆಂಗಳೂರು, ಜೂ.11- ಸಾರ್ವಜನಿಕರು ಹಾಗೂ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಜಿಂದಾಲ್ ಉಕ್ಕು ಮತ್ತು ಕಬ್ಬಿಣದ ಕಂಪನಿಗೆ ನೀಡಲಾಗಿದ್ದ ಜಮೀನನ್ನು ಹಿಂಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಕಳೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನವನ್ನು ಕೂಡಲೇ ವಾಪಸ್ ಪಡೆಯುವಂತೆ ಖುದ್ದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸೂಚನೆ ಕೊಟ್ಡ ಹಿನ್ನೆಲೆಯಲ್ಲಿ ದೋಸ್ತಿ ಸರ್ಕಾರ ಜಮೀನು ನೀಡುವ ನಿರ್ಧಾರವನ್ನು ಕೈ ಬಿಡಲು ಮುಂದಾಗಿದೆ.

ಪ್ರತಿಪಕ್ಷ ಬಿಜೆಪಿ ಇದೇ ವಿಷಯವನ್ನು ಮುಂದಿಟ್ಟುಕೊಂಡು ದೋಸ್ತಿ ಸರ್ಕಾರದ ವಿರುದ್ಧ ರಾಜ್ಯದಾದ್ಯಂತ ಹೋರಾಟ ನಡೆಸಲು ಮುಂದಾಗಿತ್ತು.

ಅಲ್ಲದೆ ಸರ್ಕಾರದ ಈ ತೀರ್ಮಾನಕ್ಕೆ ರೈತ ಸಂಘಟನೆಗಳು ,ವಿವಿಧ ಸಾಮಾಜಿಕ ಹೋರಾಟಗಾರರು ಕೂಡಾ ವಿರೋಧ ವ್ಯಕ್ತಪಡಿಸಿದ್ದರು.

ಮೊದಲೇ ಸಚಿವ ಸಂಪುಟ ವಿಸ್ತರಣೆಯ ಗೊಂದಲ, ಸಚಿವ ಸ್ಥಾನ ಸಿಗದೆ ಮೈತ್ರಿ ಸರ್ಕಾರದ ವಿರುದ್ಧ ಶಾಸಕರು ಬಂಡಾಯ ಸಾರಿರುವಾಗ ಇಲ್ಲದ ಉಸಾಬರಿ ಬೇಡ ಎಂದು ವೇಣುಗೋಪಾಲ್ ಸಲಹೆ ಮಾಡಿದ್ದಾರೆ ಎನ್ನಲಾಗಿದೆ.

ಇದಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿದಂತೆ ಬಹುತೇಕರು ಸಮ್ಮತಿಸಿದ್ದಾರೆ.

ಒಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಕುರೇಕುಪ್ಪ ಜೆಎಸ್‍ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಸಂಸ್ಥೆಗೆ 2000.58 ಎಕರೆ ಹಾಗೂ ಯರಬನಹಳ್ಳಿ ಗ್ರಾಮದ 1666.73 ಎಕರೆ ಸೇರಿ 3667 ಎಕರೆ ಜಮೀನನ್ನು ಗುತ್ತಿಗೆಯಿಂದ ಕ್ರಯಕ್ಕೆ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿತ್ತು.

ಕಳೆದ ಮೇ 27 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬಳ್ಳಾರಿಯ ತೋರಣಗಲ್ಲು ಹಾಗೂ ಕುರೆಕುಪ್ಪ ಗ್ರಾಮಗಳಲ್ಲಿನ 2000 ಎಕರೆ ಹಾಗೂ ಮುಸೇನಾಯಕನಹಳ್ಳಿ ಮತ್ತು ಯರಬನಹಳ್ಳಿಯ1666.73 ಎಕರೆ ಜಮೀನನ್ನು 2006 ಮತ್ತು 2007 ರಲ್ಲಿ ಗುತ್ತಿಗೆ ಮತ್ತು ಮಾರಾಟದ ಆಧಾರದ ಮೇಲೆ ಸರ್ಕಾರ ಜಿಂದಾಲ್ ಸ್ಟೀಲ್ ಕಂಪನಿಗೆ ನೀಡಿತ್ತು. ಗುತ್ತಿಗೆ ಅವಧಿ ಮುಗಿದ ಹಿನ್ನಲೆಯಲ್ಲಿ ಎರಡು ಒಪ್ಪಂದಗಳಂತೆ 3667 ಎಕರೆ ಜಮೀನನ್ನು ಜಿಂದಾಲ್ ಸ್ಟೀಲ್ ಕಂಪನಿಗೆ ಪರಭಾರೆ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತ್ತು.

ಆದರೆ ಸಂಪುಟ ಸಭೆಗೆ ಮುನ್ನ ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್ ಕೆ ಪಾಟೀಲ್ ಅವರು, ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಜೆಎಸ್ ಡಬ್ಯ್ಲು ಸ್ಟೀಲ್ ಗೆ ಭೂಮಿ ಮಾರಾಟ ಮಾಡುವ ನಿರ್ಣಯವನ್ನು ಸಚಿವ ಸಂಪುಟ ಅಂಗೀಕರಿಸದಂತೆ ಮನವಿ ಮಾಡಿದ್ದರು. ಆದರೂ ಸಚಿವ ಸಂಪುಟ ಸಭೆಯಲ್ಲಿ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ಅವರ ಒತ್ತಡಕ್ಕೆ ಮಣಿದು ಪರಬಾರೆಗೆ ಸಂಪುಟ ಸಮ್ಮತಿ ನೀಡಿತ್ತು ಎನ್ನಲಾಗಿದೆ.

ಸಚಿವ ಸಂಪುಟ ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಸಿ ಅನುಮೋದನೆ ನೀಡಿದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಂಪುಟ ನಿರ್ಣಯಕ್ಕೆ ಅಂಗೀಕಾರ ನೀಡಿರಲಿಲ್ಲ ಎನ್ನಲಾಗಿದೆ. ಸಚಿವ ಸಂಪುಟ ತೀರ್ಮಾನದ ಬಳಿಕ ಮಾಜಿ ಸಚಿವ ಎಚ್.ಕೆ.ಪಾಟೀಲ್ ಮುಖ್ಯಮಂತ್ರಿ ಹಾಗೂ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಪತ್ರ ಬರೆದು ಜಿಂದಾಲ್ ಸಂಸ್ಥೆ ಸರ್ಕಾರದ ಅಧೀನ ಸಂಸ್ಥೆಯಾದ ಎಂಎಂಎಲ್ ಗೆ 2000 ಕೋಟಿ ರೂ ಬಾಕಿ ಪಾವತಿಸಬೇಕಿದೆ ಹಾಗೂ ಸಂಸ್ಥೆಯ ಮೇಲೆ ಲೋಕಾಯುಕ್ತ ಅಕ್ರಮ ಗಣಿಗಾರಿಕೆ ವರದಿಯ 23ನೇ ಅಧ್ಯಾಯದಲ್ಲಿ ಲಕ್ಷಾಂತರ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಸಾಗಾಣಿಕೆ ಮಾಡಿರುವ ಆರೋಪ ಹೊರಿಸಲಾಗಿದ್ದು, ಈ ಪ್ರಕರಣ ತಾರ್ಕಿಕ ಅಂತ್ಯವಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ಏಷ್ಯಾದಲ್ಲಿ ಅತ್ಯಂತ ದೊಡ್ಡ ಸ್ಟೀಲ್ ಘಟಕವನ್ನು ಜಿಂದಾಲ್ ಸಂಸ್ಥೆ ಬಳ್ಳಾರಿಯ ಸಂಡೂರಿನಲ್ಲಿ ನಡೆಸುತ್ತಿದೆ.ಈ ಸಂಸ್ಥೆಗೆ ಕಾನೂನು ಪ್ರಕಾರ 10 ವರ್ಷಗಳ ನಂತರ ಗುತ್ತಿಗೆಯನ್ನು ಕ್ರಯವಾಗಿ ಮಾಡಿಕೊಡುವ ಒಡಂಬಡಿಕೆಯನ್ನು ಹಿಂದಿನ ಸರ್ಕಾರ ಮಾಡಿಕೊಂಡಿತ್ತು. ಅದೂ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದ 2006-07 ಅವಧಿಯಲ್ಲಿ ಎಂಬುದು ಗಮನಾರ್ಹ ಸಂಗತಿ.

ಭಾರೀ ವಿರೋಧ
ಜಿಂದಾಲ್ ಸಂಸ್ಥೆಯ ಮೇಲೆ ಅಕ್ರಮ ಅದಿರು ಸಾಗಾಣಿಕೆ ಆರೋಪವಿದ್ದು ರಾಜ್ಯ ಸರ್ಕಾರಕ್ಕೆ 342 ಕೋಟಿ ರೂ ನಷ್ಟ ಸಂಭವಿಸಿದೆ ಎಂಬ ವರದಿಯಿದೆ. ಸಂಸ್ಥೆಯ ವಿರುದ್ದ ಸಮಾಜ ಪರಿವರ್ತನಾ ಸಮಾಜದ ಎಸ್ ಆರ್ ಹಿರೇಮಠ್ ಅವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ದಾಖಲಿಸಿದ್ದಾರೆ. ಈ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದರು.ಅಲ್ಲದೆ ಅಡ್ವೋಕೇಟ್ ಜನರಲ್ ಅವರು ಪೂರ್ಣ ಮಾಹಿತಿ ಪರಿಶೀಲನೆ ನಡೆಸದೆ ಜಿಂದಾಲ್ ಸಂಸ್ಥೆಗೆ ಭೂಮಿ ಮಾರಾಟ ಮಾಡಲು ಕಾನೂನು ಸಲಹೆ ನೀಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಎಚ್ ಕೆ ಪಾಟೀಲ್ ನಿರಂತರ ಪತ್ರದಲ್ಲಿ ಆರೋಪಿಸಿದ್ದರು.

ಪ್ರತಿ ಎಕರೆಗೆ 90 ಸಾವಿರ ರೂ.ದರವನ್ನು ಅಂದಿನ ಬಿಜೆಪಿ ಸರ್ಕಾರ ನಿಗದಿ ಮಾಡಿತ್ತು.ಅದರಂತೆ ಸರ್ಕಾರಕ್ಕೆ 18 ಕೋಟಿ ರೂ ಹಣವನ್ನು ಜಿಂದಾಲ್ ಸಂಸ್ಥೆ ಪಾವತಿಸಿದೆ.ಇದರಲ್ಲಿ ಅಕ್ರಮ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರೋಪಿಸಿದ್ದರು.

ಮಾಜಿ ಸಚಿವ ಎಚ್.ಕೆ.ಪಾಟೀಲ್ ಜಿಂದಾಲ್ ವಿರುದ್ದ ಪತ್ರ ಸಮರ ನಡೆಸಿದ ಬಳಿಕ ವಿಪಕ್ಷ ಬಿಜೆಪಿ ನಾಯಕರು ಭೂಮಿ ಪರಭಾರೆ ಸಂಪುಟ ನಿರ್ಣಯವನ್ನು ಕೈಬಿಡಬೇಕು. ಗುತ್ತಿಗೆ ಅವಧಿಯನ್ನು ಮುಂದುವರೆಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಅಲ್ಲದೆ ಬಿಜೆಪಿ ಸಂಸದರು, ಶಾಸಕರು ವಿಧಾನ ಪರಿಷತ್ ಸದಸ್ಯರು ಜೂನ್ 14 ರಿಂದ 16 ರವರಗೆ ಮೂರು ದಿನ ಅಹೋರಾತ್ರಿ ಧರಣಿಗೆ ನಿರ್ಧರಿಸಿದ್ದು, ಇದು ಮೈತ್ರಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಈ ನಡುವೆ ಎಚ್ ಕೆ ಪಾಟೀಲರ ಮನವೊಲಿಸಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಂದಾನ ಸಭೆ ನಡೆಸಲಾಯಿತು.ಭೂಮಿ ಪರಭಾರೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ಬರಲಿದೆ ಎಂಬ ಕಾರಣಕ್ಕೆ ಮಾರಾಟ ಕೈಬಿಡುವ ಬಗ್ಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಅಂತಿಮ ನಿರ್ಣಯ ಕೈಗೊಳ್ಳುವ ಬಗ್ಗೆ ಈ ನಾಯಕರ ನಡುವೆ ಸಹಮತ ಮೂಡಿಸಿದರು.

ಒಟ್ಟಾರೆ ಜಿಂದಾಲ್ ಸ್ಟೀಲ್ ಸಂಸ್ಥೆಗೆ ಭೂಮಿ ನೀಡಲು ಕುಮಾರಸ್ವಾಮಿ -ಯಡಿಯೂರಪ್ಪ ನೇತೃತ್ವದ ಮೈತ್ರಿ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಆದರೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಭೂಮಿ ಪರಭಾರೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿರುವುದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ ಸಚಿವ ಸಂಪುಟ ನಿರ್ಣಯ ಹಿಂಪಡೆಯುವ ಸಾಧ್ಯತೆ ಹೆಚ್ಚಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ