ಬೆಂಗಳೂರು, ಜೂ.11- ಐಎಂಎ ಸಮೂಹ ಕಂಪೆನಿಯ ಮಾಲೀಕ ಮಹಮ್ಮದ್ ಮನ್ಸೂರ್ ಖಾನ್ ನಾಪತ್ತೆ ಸಂಬಂಧ ಹೂಡಿಕೆದಾರರಿಂದ ದೂರು ದಾಖಲಾದ ಬಳಿಕವೂ ನಿನ್ನೆ ಒಂದೇ ದಿನ ಎರಡರಿಂದ ಮೂರು ಕೋಟಿ ರೂ.ಹಣ ಐಎಂಎ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಿರುವುದು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣ ಸಂಬಂಧ ಸುಮಾರು 10ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಪೊಲೀಸರು ಸೀಜ್ ಮಾಡಿದ್ದರು. ಸೀಜ್ ಮಾಡಲಾಗಿದ್ದ ಬ್ಯಾಂಕ್ ವಹಿವಾಟು ಪರಿಶೀಲನೆ ವೇಳೆ ಮನ್ಸೂರ್, ಡೈರೆಕ್ಟರ್ಸ್, ಐಎಂಎ ಖಾತೆಗೆ ಆನ್ಲೈನ್ನಲ್ಲಿ ಮತ್ತು ಬ್ಯಾಂಕ್ ಮೂಲಕ ಕೋಟ್ಯಂತರ ರೂ. ಹಣವನ್ನು ಗ್ರಾಹಕರು ಸಂದಾಯ ಮಾಡಿರುವುದು ಕಂಡುಬಂದಿದೆ.
ವಂಚನೆಗೊಳಗಾದ ಗ್ರಾಹಕರು ದೂರು ನೀಡುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಐಎಂಎ ಖಾತೆಗಳನ್ನು ಸೀಜ್ ಮಾಡಿ ಗ್ರಾಹಕರು ಹಣ ಹಾಕದಂತೆ ಮನವಿ ಮಾಡಿದ್ದಾರೆ.
ಆನ್ಲೈನ್ನಲ್ಲಿ ಹಣ ಸಂದಾಯ ಮಾಡಿರುವವರ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ನಿರ್ದೇಶಕರಿಗಾಗಿ ಹುಡುಕಾಟ: ಐಎಂಎ ಕಂಪೆನಿಯ ನಾಲ್ವರು ನಿರ್ದೇಶಕರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಮನ್ಸೂರ್ಖಾನ್ ಅವರು ಕಳೆದ ಗುರುವಾರ ಕರೆದಿದ್ದ ನಿರ್ದೇಶಕರ ಸಭೆಯಲ್ಲಿ ನಾಲ್ವರು ನಿರ್ದೇಶಕರು ಪಾಲ್ಗೊಂಡಿದ್ದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಸುಮಾರು 2 ಗಂಟೆಗಳ ಕಾಲ ನಡೆದಿದ್ದ ಸಭೆಯಲ್ಲಿ ಯಾವ ವಿಷಯದ ಬಗ್ಗೆ ಚರ್ಚೆ ನಡೆಸಲಾಗಿದೆ, ಮನ್ಸೂರ್ ಏನು ಹೇಳಿದ್ದರು ಎಂಬಿತ್ಯಾದಿ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಸಭೆ ಬಳಿಕ ನಿರ್ದೇಶಕರ ಮೊಬೈಲ್ ಪೋನ್ಗಳು ಸ್ವಿಚ್ ಆಫ್ ಆಗಿದ್ದು, ಮನ್ಸೂರ್ ಎಲ್ಲಿ ತಲೆಮರೆಸಿಕೊಂಡಿದ್ದಾರೆಂಬ ಬಗ್ಗೆ ನಿರ್ದೇಶಕರಿಗೆ ತಿಳಿದಿರಬಹುದೆಂಬ ಆಧಾರದ ಮೇಲೆ ನಿರ್ದೇಶಕರ ಹುಡುಕಾಟ ನಡೆದಿದೆ.
ಗ್ರಾಹಕರಿಂದ ಇಂದೂ ದೂರು ದಾಖಲು: ಐಎಂಎ ಜ್ಯುವೆಲ್ಸ್ನಲ್ಲಿ ಹಣ ಹೂಡಿಕೆ ಮಾಡಿ ಮೋಸಕ್ಕೊಳಗಾದ ಗ್ರಾಹಕರು ಇಂದು ಕೂಡ ಆಗಮಿಸಿ ದೂರು ನೀಡುತ್ತಿದ್ದುದು ಕಂಡುಬಂತು.
ಶಿವಾಜಿನಗರದ ಸಮದ್ ಹೌಸ್ನಲ್ಲಿ ದೂರು ಸ್ವೀಕರಿಸಲು ಖುದ್ದು ಪೊಲೀಸರು ಕುಳಿತಿದ್ದಾರೆ. ಬೆಳಗ್ಗೆಯಿಂದಲೇ ತಮ್ಮ ಪುಟ್ಟ ಮಕ್ಕಳನ್ನು ಎತ್ತಿಕೊಂಡು ಬಂದು ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದೇವೆ. ಬ್ಯಾಂಕ್ನಲ್ಲಿದ್ದ ಹಣ ತಂದು ಕಷ್ಟಕ್ಕಾಗಲಿ ಎಂದು ಈ ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದೆ.ಇದೀಗ ಇದ್ದ ಹಣವನ್ನೂ ಕಳೆದುಕೊಂಡು ನಮ್ಮ ಕುಟುಂಬ ಕಂಗಾಲಾಗಿದೆ ಎಂದು ಅಳಲು ತೋಡುತ್ತ ವಂಚನೆಗೊಳಗಾದ ಮಹಿಳಾ ಗ್ರಾಹಕರು ದೂರು ನೀಡುತ್ತಿದ್ದುದು ಸಾಮಾನ್ಯವಾಗಿತ್ತು.