ಕೊಲ್ಕತ್ತಾ: ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ರ್ಯಾಲಿವೇಳೆ ಧ್ವಂಸಗೊಂಡಿದ್ದ ಸಮಾಜ ಸುಧಾರಕ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಪುನರ್ ಸ್ಥಾಪಿಸಲಾಗಿದ್ದು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರತಿಮೆ ಅನಾವರಣಗೊಳಿಸಿದರು.
ಕಾಲೇಜ್ ಸ್ಟ್ರೀಟ್ ನಲ್ಲಿನ ಹರೆ ಶಾಲಾ ಮೈದಾನದಲ್ಲಿ ಇಂದು ನಡೆದ ಸಮಾರಂಭದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದುಷ್ಕರ್ಮಿಗಳಿಂದ ಧ್ವಂಸಗೊಂಡಿರುವ ವಿದ್ಯಾಸಾಗರ ಪ್ರತಿಮೆಯನ್ನು ಪುನರ್ ಪ್ರತಿಷ್ಠಾಪಿಸಿದರು.
ಮೇ 14ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಚುನಾವಣಾ ರೋಡ್ ಶೋ ವೇಳೆಯಲ್ಲಿ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸಂಭವಿಸಿದ ಘರ್ಷಣೆ ವೇಳೆಯಲ್ಲಿ 19 ನೇ ಶತಮಾನದ ಸಮಾಜ ಸುಧಾರಕ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು. ನಂತರ ಮೇ 16ರಂದು ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ , ಅದೇ ಸ್ಥಳದಲ್ಲಿ ವಿದ್ಯಾಸಾಗರ್ ಅವರ ಹೊಸ ಪ್ರತಿಮೆ ಸ್ಥಾಪಿಸುವ ಭರವಸೆ ನೀಡಿದ್ದರು.
ಈ ಪ್ರಸ್ತಾವನೆಯನ್ನು ನಿರಾಕರಿಸಿದ್ದ ಮಮತಾ ಬ್ಯಾನರ್ಜಿ ಪ್ರತಿಮೆ ಸ್ಥಾಪಿಸಲು ನಮ್ಮ ಬಳಿಯೇ ಸಾಕಷ್ಟು ಹಣವಿದೆ ಎಂದು ಹೇಳಿಕೆ ನೀಡಿದ್ದರು. ಕೊಟ್ಟ ಮಾತಿನಂತೆ ಮಮತಾ ಇಂದು ಪ್ರತಿಮೆ ಮರು ಸ್ಥಾಪನೆ ಮಾಡಿ ಅನಾವರಣಗೊಳಿಸಿದ್ದಾರೆ.