ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ವಿಧಿವಶ

ಬೆಂಗಳೂರು:ಜೂ-10: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ನಾಟಕಕಾರ, ನಿರ್ದೇಶಕ ಗಿರೀಶ್​ ಕಾರ್ನಾಡ್​ ಅವರು ಇಂದು ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ಮನೆಯಲ್ಲಿ ವಿಧಿವಶರಾಗಿದ್ದಾರೆ.

81 ವರ್ಷದ ಗಿರೀಶ್​ ಕಾರ್ನಾಡ್​ ಅವರು ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ನೀಡುತ್ತಿದ್ದರೂ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಗಿರೀಶ ಕಾರ್ನಾಡ್‌ 1938 ಮೇ 19ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದ್ದರು. ತಂದೆ ಡಾ.ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾ ಬಾಯಿ. ಪ್ರಗತಿ ಪರ ಮನೋಭಾವದ ಡಾ.ರಘುನಾಥ ಕಾರ್ನಾಡರು ಮದುವೆಯಾದ ಹೊಸತರಲ್ಲೇ ಪತ್ನಿಯನ್ನು ಕಳೆದು ಕೊ೦ಡರು.

ಕಾರ್ನಾಡ್ ಅವರ ಪ್ರಾಥಮಿಕ ಶಿಕ್ಷಣ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಹಾಗೂ ಪದವಿ ಶಿಕ್ಷಣ ಕರ್ನಾಟಕ ಕಾಲೇಜಿನಲ್ಲಿ ನಡೆಯಿತು.ಆ ಬಳಿಕ ರ್ಹೊಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್‌ಫರ್ಡ್‌ನಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ತೆರಳಿದರು. ಗಿರೀಶ ಕಾರ್ನಾಡರು ಆಕ್ಸ್‌ಫರ್ಡ್‌ ಡಿಬೇಟ ಕ್ಲಬ್ ಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್ ಆಗಿದ್ದರು.

ನಾಟಕಕಾರರಾದ ಇವರು ಏಕಾಂಕ ನಾಟಕ ಮಾ ನಿಷಾಧ, ಯಯಾತಿ, ತುಘಲಕ್​, ನಾಗಮಂಡಲ, ಟಿಪ್ಪುವಿನ ಕನಸುಗಳು, ಹಿಟ್ಟಿನ ಹುಂಜ ಅಥವಾ ಬಲಿ, ಅಗ್ನಿ ಮತ್ತು ಮಳೆ, ಅಂಜುಮಲ್ಲಿಗೆ, ಒಡಕಲು ಬಿಂಬ ಸೇರಿ ಹಲವು ನಾಟಕಗಳನ್ನು ರಚಿಸಿದ್ದಾರೆ. ಗಿರೀಶ್ ಕಾರ್ನಾಡ್ ತಮ್ಮ ಸಮಗ್ರ ಸಾಹಿತ್ಯಕ್ಕೆ 1998ರಲ್ಲಿ ಜ್ಞಾನಪೀಠ ಪ್ರಶಸ್ತಿ ಭಾಜನರಾಗಿದ್ದಾರೆ. 2011ರಲ್ಲಿ ಆಡಾಡತ ಆಯುಷ್ಯ ಎಂಬ ತಮ್ಮ ಆತ್ಮಚರಿತ್ರೆ ಬರೆದಿದ್ದರು.

ಕನ್ನಡ, ತಮಿಳು, ಹಿಂದಿ ಸೇರಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 1970ರಿಂದ ಅವರ ಸಿನಿಮಾ ಪಯಣ ಶುರುವಾಗಿದೆ. ಸಂಸ್ಕಾರ, ವಂಶವೃಕ್ಷ, ಎಕೆ 47, ಸಂತ ಶಿಶುನಾಳ ಶರೀಫ, ಏಪ್ರಿಲ್​ ಫೂಲ್​, ತನನಂ ತನನಂ, ಆ ದಿನಗಳು, ಕೆಂಪೇಗೌಡ ಸಿನಿಮಾಗಳಲ್ಲಿ ಅಮೋಘ ಅಭಿನಯ ನೀಡಿದ್ದಾರೆ. ಸಂತ ಶಿಶುನಾಳ ಶರೀಫದಲ್ಲಿ ಇವರು ನಿರ್ವಹಿಸಿದ ಗುರು ಗೋವಿಂದ ಭಟ್ಟರ ಪಾತ್ರಕ್ಕೆ ಕರ್ನಾಟಕ ರಾಜ್ಯ ಅತ್ಯುತ್ತಮ ಪೋಷಕ ನಟ ಗೌರವ ಲಭಿಸಿದೆ. ಅಲ್ಲದೆ ಇತ್ತೀಚೆಗೆ ತೆರೆಕಂಡ ಹಿಂದಿ ಸಿನಮಾ ಸಲ್ಮಾನ್​ ಖಾನ್​ ಅವರ ಟೈಗರ್ ಜಿಂದಾ ಹೈ ದಲ್ಲೂ ಕೂಡ ಅಭಿನಯಿಸಿದ್ದಾರೆ.

ಗಿರೀಶ್​ ಕಾರ್ನಾಡ್​ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 1974ರಲ್ಲಿ ಪದ್ಮಶ್ರೀ, 1992ರಲ್ಲಿ ಪದ್ಮಭೂಷಣ, 1998ರಲ್ಲಿ ಜ್ಞಾನಪೀಠ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಹಾಗೇ ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡತಿ ಮತ್ತು ಯು.ಆರ್​.ಅನಂತಮೂರ್ತಿ ಅವರ ಸಂಸ್ಕಾರ ಸಿನಿಮಾ ಮಾಡುವ ಮೂಲಕ ಇಬ್ಬರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕಾದಂಬರಿಗಳನ್ನು ಸಿನಿಮಾ ಮಾಡಿದ ಏಕೈಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

Veteran actor and playwright, Girish Karnad Passes Away

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ