ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ?; ಎರಡು ದಶಕಗಳ ನಂತರ ಕಾಂಗ್ರೆಸ್​ನಲ್ಲಿ ಮಹತ್ವದ ಬದಲಾವಣೆ!

ನವದೆಹಲಿಲೋಕಸಭಾ ಚುನಾವಣೆಯ ನಂತರ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್​ ಪಕ್ಷದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ರಾಹುಲ್ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಎರಡು ದಶಕಗಳ ನಂತರ ಮೊದಲ ಬಾರಿಗೆ ಗಾಂಧಿ ಕುಟುಂಬದ ಹೊರತಾದ ವ್ಯಕ್ತಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಏರುವ ಎಲ್ಲಾ ಸಾಧ್ಯತೆಗಳೂ ಎದ್ದು ಕಾಣಿಸುತ್ತಿವೆ. ಅಲ್ಲದೆ ಕರ್ನಾಟಕ ಹಿರಿಯ  ನಾಯಕ ಮಲ್ಲಿಕಾರ್ಜುನ ಖರ್ಗೆ ಹೆಸರು ಈ ಸ್ಥಾನಕ್ಕೆ ಪಸ್ತಾಪವಾಗುತ್ತಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಮತ್ತೊಮ್ಮೆ ಹೀನಾಯ ಸೋಲು ಅನುಭವಿಸಿತ್ತು. ಈ ಸೋಲಿನ ಹೊಣೆ ಹೊತ್ತ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಕಾರ್ಯಕಾರಣಿ ಸಭೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ ಹಿಂದುಳಿದ ವರ್ಗದ ವ್ಯಕ್ತಿಯನ್ನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವಂತೆಯೂ ಸಲಹೆ ನೀಡಿದ್ದರು. ಹೀಗಾಗಿ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಎಐಸಿಸಿ ಅಧ್ಯಕ್ಷ ಸ್ಥಾನದ ರೇಸ್​ನಲ್ಲಿ ಮುಂಚೂಣಿಯಲ್ಲಿ ಕೇಳಿಬರುತ್ತಿದೆ.

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್​ ಗಾಂಧಿ ನೀಡಿರುವ ರಾಜೀನಾಮೆಯನ್ನು ಈವರೆಗೆ ಕಾಂಗ್ರೆಸ್ ಕಾರ್ಯಕಾರಣಿ ಸಭೆ ಅಂಗೀಕಾರ ಮಾಡಿಲ್ಲ. ಅಲ್ಲದೆ ಮತ್ತೆ ಅವರನ್ನೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತೆಯೂ ಒತ್ತಾಯಿಸುತ್ತಿದೆ. ಮತ್ತೊಂದೆಡೆ ಸೋನಿಯಾ ಗಾಂಧಿಯವರು ಅಧ್ಯಕ್ಷರಾಗಬೇಕು ಎಂಬ ಕೂಗು ಬಲವಾಗಿ ಕೇಳೀಬರುತ್ತಿದೆ. ಆದರೆ, ಈ ಇಬ್ಬರೂ ನಾಯಕರು ಅಧ್ಯಕ್ಷರಾಗಿ ಮುಂದುವರೆಯಲು ಆಸಕ್ತಿ ತೋರಿಸುತ್ತಿಲ್ಲ ಎನ್ನಲಾಗುತ್ತಿದೆ.

ಕೊನೆ ಗಳಿಗೆಯಲ್ಲಿ ರಾಹುಲ್ ಹಾಗೂ ಸೋನಿಯಾ ಗಾಂಧಿ ಇಬ್ಬರೂ ಅಧ್ಯಕ್ಷ ಸ್ಥಾನಕ್ಕೆ ಒಪ್ಪದಿದ್ದರೆ ಮಲ್ಲಿಕಾರ್ಜುನ ಖರ್ಗೆ ಹೆಸರು ಅಂತಿಮವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಈಗಾಗಗಲೇ ನಿಷ್ಠಾವಂತ, ಅನುಭವಿ ಮತ್ತು ದಲಿತ ನಾಯಕ ಎಂಬ ಹಿನ್ನೆಲೆಯಲ್ಲಿ ಖರ್ಗೆ ಹೆಸರು ಎಐಸಿಸಿಯಲ್ಲಿ ಪ್ರಸ್ತಾಪವಾಗಿದೆ. ಅಲ್ಲದೆ ಸ್ವತಃ ರಾಹುಲ್ ಗಾಂಧಿಯೇ ಎಸ್ ಸಿ, ಎಸ್ ಟಿ ಅಥವಾ ಆದಿವಾಸಿ ನಾಯಕನನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ಸಲಹೆ ನೀಡಿರುವುದು ಈ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಏರುವ ಎಲ್ಲಾ ಸಾಧ್ಯತೆಗಳನ್ನು ಮುಂದಿಟ್ಟಿದೆ.

ಇದು ಸಾಧ್ಯವಾಗಿ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್​ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಏರಿದರೆ ಎರಡು ದಶಕಗಳ ನಂತರ ಗಾಂಧಿ ಕುಟುಂಬದ ಹೊರತಾದ ವ್ಯಕ್ತಿ ಈ ಹುದ್ದೆಗೆ ಏರಿದ ಸಾಧನೆಯನ್ನು ಖರ್ಗೆ ನಿರ್ಮಿಸಲಿದ್ದಾರೆ. 1996 ರಿಂದ 1998ರ ಅವಧಿಯಲ್ಲಿ ಕೋಲ್ಕತ್ತಾ ಮೂಲದ ಮಾಜಿ ಕೇಂದ್ರ ಸಚಿವ ದಿವಂಗತ ಸೀತಾರಾಮ್ ಕೇಸರಿ ಈ ಹುದ್ದೆಯನ್ನು ಅಲಂಕರಿಸಿದ ಕೊನೆಯ ಗಾಂಧಿ ಕುಟುಂಬದ ಹೊರತಾದ ವ್ಯಕ್ತಿ ಎನಿಸಿಕೊಂಡಿದ್ದಾರೆ.

ಇನ್ನೂ ಈ ಹುದ್ದೆಯನ್ನು ಅಲಂಕರಿಸಿದ ಎರಡನೇ ಕನ್ನಡಿಗ ಎಂಬ ಹೆಗ್ಗಳಿಕೆಗೂ ಖರ್ಗೆ ಪಾತ್ರರಾಗಲಿದ್ದಾರೆ. 1868-69ರ ಅವಧಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್​.ನಿಜಲಿಂಗಪ್ಪ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಕರ್ನಾಟಕ ಮೂಲದ ನಾಯಕ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ